ಶಿವಮೊಗ್ಗ: ಸ್ಥಳೀಯ ಉದ್ದಿಮೆದಾರರು ಹೆಚ್ಚಾಗಬೇಕು ಎಂಬುದು ವಾಣಿಜ್ಯ ಸಂಘದ ಆಶಯ. ಹೊಸ ಉದ್ಯಮದಾರರಿಗೆ ಸ್ವಂತ ಉದ್ಯಮ ಆರಂಭಿಸಲು ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರು ಹೇಳಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 2ರ ಎಲ್‌ಬಿಎಸ್ ನಗರದಲ್ಲಿ ಕರ್ನಾಟಕ ಓನ್ ಕೇಂದ್ರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರಿಗೆ ಹೆಚ್ಚು ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು. ಇಂತಹ ಸಂಸ್ಥೆಗಳಿಂದ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸರ್ಕಾರಿ ಸೇವೆಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಜನರು ಕೇಂದ್ರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಭಾರತ ದೇಶದ ಆರ್ಥಿಕವಾಗಿ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಲು ಉದ್ದಿಮೆದಾರರ ಸಂಖ್ಯೆ ಹೆಚ್ಚಾಗುವ ಜೊತೆಯಲ್ಲಿ ಆರ್ಥಿಕ ವಹಿವಾಟು ಅಧಿಕವಾಗಬೇಕು. ಹೊಸ ಉದ್ದಿಮೆದಾರರು ಸ್ಥಳೀಯ, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯಮ ಆರಂಭಿಸಿ ಯಶಸ್ವಿಯಾಗಬೇಕು ಎಂದು ಆಶಿಸಿದರು.
ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ಸ್ಥಳೀಯ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆಗಳನ್ನು ನೀಡಲು ಕರ್ನಾಟಕ ಓನ್ ಸಂಸ್ಥೆಯಿಂದ ಸಾಧ್ಯವಾಗಲಿದೆ. ನೂರಕ್ಕೂ ಹೆಚ್ಚು ಸೇವೆಗಳು ಕರ್ನಾಟಕ ಓನ್ ನಿಂದ ಸಾಧ್ಯವಾಗಲಿದೆ. ಪಹಣಿ, ವಿದ್ಯುತ್ ಬಿಲ್ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ಸೇವೆಗಳು ಲಭ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆನ್‌ಲೈನ್ ನಲ್ಲಿ ಲಭ್ಯವಿರುವ ಸೇವೆಗಳು ದೊರೆಯಲಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಸುಪ್ರಿಯಾ, ಗಣೇಶ್ ಪ್ರಸಾದ್, ನಾಗವೇಣಿ, ರವಿ, ಎನ್.ವಿ.ಭಟ್, ಶ್ರೀಧರ್, ಬಿಂದು ವಿಜಯ್‌ಕುಮಾರ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.