ಶಿವಮೊಗ್ಗ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದು, ಉದ್ಯಮ, ಆಹಾರ ಕ್ಷೇತ್ರ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ನಗರದ ಒಕ್ಕಲಿಗರ ಮಹಿಳಾ ವೇದಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಲೆನಾಡು ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನಡೆಯುತ್ತಿದೆ. ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಸರ್ಕಾರ ಎಲ್ಲ ರೀತಿ ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ. ಮಹಿಳೆಯರ ಅತ್ಮರಕ್ಷಣೆಗೆ ಸಂಬಂಧಿಸಿ ಕರಾಟೆ ಹಾಗೂ ಅನೇಕ ಆತ್ಮರಕ್ಷಣಾ ಕಲೆಗಳನ್ನು ಕಲಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಸುಪ್ರಿಯಾ ರಾಮಪ್ಪ ಮಾತನಾಡಿ, ಮೇಳಗಳಿಂದ ಪರಸ್ಪರ ಓಡನಾಟ ಸಂಪರ್ಕ ಹೆಚ್ಚುವುದರಿಂದ ಆರ್ಥಿಕವಾಗಿ ಸಬಲರಾಗುತ್ತಾರೆ. ಮಲೆನಾಡು ಮೇಳದಲ್ಲಿ ಹಾಸನ, ಬೆಂಗಳೂರು, ಚಿಕ್ಕಮಗಳೂರು, ತೀರ್ಥಹಳ್ಳಿ ಹಾಗೂ ಅನೇಕ ಭಾಗಗಳಿಂದ ಆಗಮಿಸಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ.ಆದಿಮೂರ್ತಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಮಹಿಳಾ ವೇದಿಕೆಯ ಕಾರ್ಯದರ್ಶಿ ರಚನಾ ಸಂತೋಷ್, ಖಜಾಂಚಿ ಮಹಿಮಾ ಪ್ರಶಾಂತ್, ಸಂಸ್ಥಾಪಕ ಅಧ್ಯಕ್ಷೆ ಛಾಯಾದೇವಂಗಿ, ಮಾಜಿ ಅಧ್ಯಕ್ಷೆ ಅಂಜು ಆದಿಮೂರ್ತಿ, ಮಧುರಾ ಮಹೇಶ್, ಸುಜಯಾ ಪುರುಷೋತ್ತಮ, ಆಶಾ ಶ್ರೀಕಾಂತ್, ಪ್ರಭಾ ಆದಿಮೂರ್ತಿ, ಸುಪ್ರಿಯಾ ರಮೇಶ್, ಜ್ಯೋತಿ ಸುಬ್ಬೇಗೌಡ, ಕಾವ್ಯ ಸತೀಶ್, ಬಿಂದು ವಿಜಯ್‌ಕುಮಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
