ಶಿವಮೊಗ್ಗ : ಬೆಳವಣಿಗೆ ಹಂತದಲ್ಲಿರುವ ಮಕ್ಕಳ ಪಾಲಿಗೆ ಪೋಷಕರೇ ಹೀರೋಗಳಿದ್ದಂತೆ. ಅವರು ಹೇಳಿದ್ದನ್ನು ಕೇಳುವುದಕ್ಕಿಂತ ಪೋಷಕರನ್ನು ಅನುಸರಿಸುತ್ತಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರ ದಲ್ಲಿ ಆಯೋಜಿಸಿದ್ದ ಕೌಟಿಲ್ಯ ಶಾಲೆಯ ವಾರ್ಷಿಕೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಮಾತುಗಳ ಬದಲಾಗಿ ಕೃತಿಯ ಮೂಲಕವೇ ಮಕ್ಕಳನ್ನು ತಿದ್ದಬೇಕು. ಮನೆಯಲ್ಲಿದ್ದಾಗ ಸಾಧ್ಯವಾದಷ್ಟು ತಮ್ಮ ನಡೆ ನುಡಿಗಳ ಮೇಲೆ ನಿಗಾ ವಹಿಸಬೇಕು ಜೊತೆಗೆ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡ ಬೇಕು ಎಂದು ಸಲಹೆ ನೀಡಿದರು.
ಸಹಾಯಕ ಡ್ರಗ್ ನಿಯಂತ್ರಕ ಡಾ. ಎಸ್.ವಿ. ವೀರೇಶ್‌ಬಾಬು ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಈ ಮೂಲಕ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ವಾಗಿರಲು ಸಾಧ್ಯವಾಗುತ್ತದೆ. ಮನೆಯ ಲ್ಲಿರುವಾಗ ಅವರ ನಡತೆಯನ್ನು ಗಮನಿಸಲೇಬೇಕು. ಒಂದು ವೇಳೆ ಸಣ್ಣಪುಟ್ಟ ಬದಲಾವಣೆಗಳಾದರೂ ಅದನ್ನು ಪ್ರಯತ್ನಿಸಬೇಕು. ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಪೋಷಕರು ಜಗಳವಾಡಬಾರದು. ಅದು ಮಕ್ಕಳ ಸೂಕ್ಷ್ಮಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕಾರ‍್ಯಕ್ರಮದಲ್ಲಿ ಉದ್ಯಮಿ ಕೆ.ಎಸ್. ಸಂತೋಷ್ ಉಪಸ್ಥಿತರಿದ್ದರು.
