ಸ್ವರಸಂಗಮ ಎಂಟರ್ಟೈನ್ ಮೆಂಟ್ ಬ್ಯಾನರ್ ನಲ್ಲಿ ಆರ್. ಸುರೇಶ್ ಬಾಬು ನಿರ್ಮಿಸಿ , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ನಿರ್ದೇಶಿಸಿರುವ ವೈಶಂಪಾಯನ ತೀರ ಸಿನಿಮಾ ಹೊಸವರ್ಷದ ಆರಂಭದ ಜನವರಿ 6 ರಂದು ತೆರೆಕಾಣಲಿದೆ.
ಪ್ರಸಿದ್ಧ ಕಥಾಲೇಖಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಇವರ ಜನಪ್ರಿಯ ಸಣ್ಣಕಥೆಯನ್ನು ಆಧರಿಸಿದ ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗುವ , ವೈಯಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ , ಪ್ರಕೃತಿ – ಪುರುಷನ ಸಂಘರ್ಷವನ್ನು ಹೇಳುವ ಕಥೆಯಾಗಿದೆ.
ಮಲೆನಾಡಿನ ಶೃಂಗೇರಿ ಭಾಗದ ಜನಜೀವನ , ಭಾಷೆ , ಸಂಸ್ಕೃತಿಯನ್ನು ಚಿತ್ರದಲ್ಲಿ ಬಳಸಲಾಗಿದ್ದು ಮತ್ತೊಂದು ಮಣ್ಣಿನ ಮೂಲಸೊಗಡಿನ ಚಿತ್ರವಾಗಿ ಮೂಡಿಬಂದಿದೆ.
30 ವರ್ಷಗಳ ಹಿಂದೆ ರಚಿತವಾದ ಕಥೆಗೆ ಇಂದು ಟ್ರೆಂಡ್ ಆಗಿರುವ ಶೈಲಿಯ ಚಿತ್ರಕಥೆ ಅಳವಡಿಸಿದ್ದು ಎಲ್ಲರಿಗೂ ಇಷ್ಟವಾಗುವಂತೆ ಕಥನ ಶೈಲಿ ಇರಲಿದೆ.
ಚಿತ್ರದ ಪ್ರಮುಖ ಪಾತ್ರಗಳು ಕೃಷ್ಣ ಭಟ್ಟ , ವೆಂಕಪ್ಪ ಹೆಗ್ಡೆ ಮತ್ತು ಕಲ್ಯಾಣಿ. ಇವುಗಳನ್ನು ಕ್ರಮವಾಗಿ ರವೀಶ್ ಹೆಗ್ಡೆ ಐನ್ ಬೈಲು , ಪ್ರಸನ್ನ ಶೆಟ್ಟಿಗಾರ್ ಮತ್ತು ವೈಜಯಂತಿ ಅಡಿಗ ನಿರ್ವಹಿಸಿದ್ದಾರೆ. ಕಥೆಯಲ್ಲಿ ಪೂರಕವಾದ ಮತ್ತೊಂದು ಟ್ರ್ಯಾಕ್ ಅಳವಡಿಸಿದ್ದು ಇದರಲ್ಲಿ ಪ್ರಮೋದ್ ಶೆಟ್ಟಿ , ಬಾಬು ಹಿರಣ್ಣಯ್ಯ ,ರಮೇಶ್ ಪಂಡಿತ್, ಬಿ. ಎಲ್. ರವಿಕುಮಾರ್ ಮತ್ತು ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದಾರೆ.
ವಿಶ್ವ ವಿಖ್ಯಾತ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್ ಪೈ , ಸಂತೋಷ್ ಪೈ ಮತ್ತು ಖ್ಯಾತ ಟಿ. ವಿ. ವಾರ್ತಾವಾಚಕ ಸುಬ್ರಹ್ಮಣ್ಯ ಹಂಡಿಗೆ ಮೊದಲಬಾರಿ ಸಿನಿಮಾಕ್ಕಾಗಿ ಬಣ್ಣ ಹಚ್ಚಿರುವುದು ಚಿತ್ರದ ವಿಶೇಷ
ರಮೇಶ್ ಭಟ್ , ಗುರುರಾಜ ಹೊಸಕೋಟಿ , ಶೃಂಗೇರಿ ರಾಮಣ್ಣ ರಂಥ ಹಿರಿಯ ಕಲಾವಿದರೂ ನಟಿಸಿರುವ ಚಿತ್ರವಿದು.
ಗುತ್ತಳಿಕೆ ಕೇಶವ , ನಯನ ಎ. ಎಸ್. ಸಸಿಮನೆ ವಿಶ್ವನಾಥ್ , ಕೃಷ್ಣಮೂರ್ತಿ , ರಾಧಾಕೃಷ್ಣ , ಸ್ಪೂರ್ತಿ , ದೀಪ್ತಿ ಆರ್ ಭಟ್ , ಅರೇಹಳ್ಳ , ವೈಶಾಲಿ , ಸ್ವಾತಿ , ಜ್ಯೋತಿ ಕಾಮತ್ , ವೈಷ್ಣವಿ ರಾವ್ , ಪೃಥ್ವಿರಾಜ್ , ಶಂಕರ್ , ವಿವೇಕ್ ಸುಂಕುರ್ಡಿ , ವಿಶ್ವನಾಥ ಶೆಟ್ಟಿ ,ಮೊದಲಾದ ಮಲೆನಾಡ ಪ್ರತಿಭಾವಂತ ರಂಗಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಶ್ರೀನಿಧಿ ಕೊಪ್ಪ ಸಂಯೋಜಿಸಿದ ಮೂರುಹಾಡುಗಳನ್ನು ಸಾದ್ವಿನಿಕೊಪ್ಪ ಮತ್ತು ವಿನಯ್ ಶೃಂಗೇರಿ ಹಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ವಿನುಮನಸು ಅವರು ಒದಗಿಸಿದ್ದಾರೆ. ಶಶೀರ ಶೃಂಗೇರಿ ಛಾಯಾಗ್ರಹಣ , ಅವಿನಾಶ್ ಶೃಂಗೇರಿ ಸಂಕಲನ , ಅಭಿಷೇಕ್ ಹೆಬ್ಬಾರ್ ಕಲಾನಿರ್ದೇಶನ , ರಾಮಚಂದ್ರ ಅವರ ಸಹನಿರ್ದೇಶನ , ಕಾರ್ತಿಕ್ ನಿರ್ವಣೆಯನ್ನು ಸಿನಿಮಾ ಹೊಂದಿದೆ.
ತಂತ್ರಜ್ಞರೆಲ್ಲರೂ ಈಗಲೂ ಮಲೆನಾಡ ನಿವಾಸಿಗಳೆಂಬುದು ವಿಶೇಷ.
ನಿರ್ದೇಶಕ ರಮೇಶ್ ಬೇಗಾರ್ ಬಗ್ಗೆ
- ಮಲೆನಾಡ ಭಾಗದಲ್ಲಿ ತಾರಾಮೌಲ್ಯ ಇರುವ ಬಹುಮುಖ ಸೃಜನಶೀಲ ರಮೇಶ್ ಬೇಗಾರ್. ನಾಟಕ ಮತ್ತು ಕಿರುತೆರೆ ಧಾರಾವಾಹಿಗಳ ನಿರ್ದೇಶಕ , ಯಕ್ಷಗಾನ ಪ್ರಸಂಗ ಕರ್ತ , ಮೆಗಾ ಈವೆಂಟ್ ಗಳ ಸಾಂಸ್ಕೃತಿಕ ಸಂಘಟಕ ಮಾತ್ರವಲ್ಲದೇ 2 ಅವಧಿಗೆ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 35 ವರ್ಷಗಳ ಸುದೀರ್ಘ ಸಾಂಸ್ಕೃತಿಕ ಕೃಷಿಯ ರಮೇಶ್ ಮಲೆನಾಡ ಜಿಲ್ಲೆಗಳಲ್ಲಿ ಮನೆಮಗನಂಥ ಖ್ಯಾತಿಪಡೆದ ಅವಿರತ ಸೃಜನಶೀಲ ಕಲಾವಿದ. ಇವರ ಸಾಂಸ್ಕೃತಿಕ ಹಿನ್ನೆಲೆ ಈ ಸಿನಿಮಾಕ್ಕೆ ಹೊಸ ಹೊಳಹು ನೀಡಿದೆ ಮಾತ್ರವಲ್ಲ ಕುತೂಹಲವನ್ನೂ ಹುಟ್ಟು ಹಾಕಿದೆ.
ನಿರ್ಮಾಪಕ ಆರ್. ಸುರೇಶ್ ಬಾಬು ಬಗ್ಗೆ
3 ದಶಕಗಳ ಹಿಂದೆ ಸ್ವರಸಂಗಮ ಎಂಬ ಆಡಿಯೋ ಕ್ಯಾಸೆಟ್ ಉದ್ಯಮ ಸ್ಥಾಪಿಸಿ ಅಪಾರ ಯಶಸ್ಸು ಕಂಡವರು ಆರ್. ಸುರೇಶ್ ಬಾಬು.
ಗುರುರಾಜುಲು ನಾಯ್ಡು ಅವರ ಗಜಗೌರಿವ್ರತ , ಕಾಳಿಂಗ ನಾವಡರ ನಾಗಶ್ರೀ , ರಾಜು ತಾಳಿಕೋಟಿ ಅವರ ಕಲಿಯುಗ ಕುಡುಕ ದಂಥ ಬಿಗ್ ಹಿಟ್ ಗಳನ್ನು ನೀಡಿದ ಖ್ಯಾತಿ ಸುರೇಶ್ ಬಾಬು ಅವರದ್ದು. ಡಾ ರಾಜ್ , ಎಸ್. ಪಿ. ಬಿ. ಸೇರಿದಂತೆ ದಿಗ್ಗಜರೆಲ್ಲರೂ ಇವರ ಕಂಪೆನಿಗಾಗಿ ಹಾಡಿದ್ದಾರೆ.
ನಂತರ ಟಿ. ವಿ. ಧಾರಾವಾಹಿ , ವೀಡಿಯೋ ವಾರ್ತೆ , ಆಡಿಯೋ – ವೀಡಿಯೋ ಸ್ಟುಡಿಯೋ ವ್ಯವಹಾರವನ್ನು ಮಾಡಿದವರು.
ಎ. ಎಸ್. ಮೂರ್ತಿ ಸಂಪಾದಕತ್ವದಲ್ಲಿ ವೀಡಿಯೋ ವಾರ್ತೆಗಳ ವಿ. ಹೆಚ್. ಎಸ್. ಕ್ಯಾಸೆಟ್ ಹೊರತಂದಿದ್ದ ಪ್ರಯೋಗ ಶೀಲರು ಈ ಸುರೇಶ್ ಬಾಬು .
