ದೇಶದಲ್ಲಿ ಕೊರೋನಾ ಸೋಂಕಿನ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷತೆ ದೃಷ್ಟಿಯಿಂದ ಮಂಗಳವಾರ ಚಿಕ್ಕಮಂಗಳೂರು, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಗುಣಮಟ್ಟದ 4 ಸಾವಿರ ಉಚಿತ ಮಾಸ್ಕ್ ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಆರ್. ಶ್ರೀನಿವಾಸ್ 2 ವರ್ಷಗಳ ನಂತರ ಮತ್ತೊಮ್ಮೆ ದೇಶದಲ್ಲಿ ಕೊರೋನಾ ಭೀತಿ ಎದುರಾಗುತ್ತಿರುವ ಕಾರಣ ಪ್ರತಿಯೊಬ್ಬರು ಸುರಕ್ಷತೆ ಹಾಗೂ ಮುಂಜಾಗ್ರತೆ ಕ್ರಮ ವಹಿಸುವ ನಿಟ್ಟಿನಲ್ಲಿ ಸಂಸ್ಥೆಯಿಂದ ಮೊದಲು ಕಾಲೇಜಿನಿಂದ ಮಾಸ್ಕ್ ವಿತರಣೆ ಕಾರ್ಯಕ್ರಮ ಪ್ರಾರಂಭಿಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನಗರದ ಪ್ರಮುಖ ಸರ್ಕಾರಿ ಹಾಗೂ ಖಾಸಗೀ ಶಾಲೆಗಳಿಗೆ ಉಚಿತ ಮಾಸ್ಕ್ ವಿತರಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಕಾರ್ಯದರ್ಶಿ ರಸೂಲ್ ಖಾನ್ ಮಾತನಾಡಿ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನದಲ್ಲಿ ತೊಡಕಾಗಬಾರದೆಂಬ ದೃಷ್ಟಿಯಿಂದ ಮಾಸ್ಕ್ ವಿತರಿಸಲಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಂತರವನ್ನು ಕಾಪಾಡಿಕೊಂಡು ಸುರಕ್ಷತೆ ಹೊಂದ ಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪವನ್, ನಿರ್ದೇಶಕ ಕೋಟೆ ಸೋಮಣ್ಣ, ಯೂತ್ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ನಂಜೇಶ್, ಐಡಿಎಸ್‌ಜಿ ಕಾಲೇಜಿನ ಪ್ರಾಂಶುಪಾಲ ರಾಜಣ್ಣ ಉಪಸ್ಥಿತರಿದ್ದರು.