ರಾಜ್ಯದಲ್ಲಿ ಕರೊನಾದ ಆತಂಕ ಇಲ್ಲದಿರುವುದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧ ವಿಧಿಸದಿರಲು ನಿರ್ಧರಿಸಿರುವ ಸರ್ಕಾರ, ಕೆಲ ಷರತ್ತುಗಳನ್ನು ಮಾತ್ರ ವಿಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕಂದಾಯ ಸಚಿವ ಆರ್. ಅಶೋಕ್ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಯಿತು. ರಾಜ್ಯದಲ್ಲಿ ಕರೊನಾ ವ್ಯಾಪಿಸುವ ಆತಂಕವಿಲ್ಲದಿದ್ದರೂ ಮುನ್ನೆಚ್ಚರಿಕೆ ಸಲುವಾಗಿ ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ. ಆದರೆ, ಮಾಸ್ಕ್ ಹಾಕದೆ ಇರುವವರಿಗೆ
ಯಾವುದೇ ದಂಡ ಹಾಕದೆ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುನ್ನೆಚ್ಚರಿಕೆಯಾಗಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸಚಿವದ್ವಯರು ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ಕೋವಿಡ್ ಲಸಿಕೆ ಎರಡು ಡೋಸ್ನಲ್ಲಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ. ಶೇ.20 ರಷ್ಟು ಜನ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಬೂಸ್ಟರ್ ಡೋಸ್ ಪಡೆಯುವುದು ಕಡ್ಡಾಯವಲ್ಲ. ಪಡೆದರೆ ಒಳ್ಳೆಯದು ಎಂಬ ಕಾರಣದಿಂದ ಮಂಗಳವಾರದಿಂದಲೇ ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡುವ ಕಾರ್ಯ ನಡೆಯಲಿದೆ
ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
