ವಿದ್ಯಾರ್ಥಿನಿಯರಲ್ಲಿ ಆಗುವ ದೈಹಿಕ ಬದಲಾವಣೆಗಳ ಬಗ್ಗೆ ಅರಿವು ಹಾಗೂ ಸೂಕ್ತ ಮಾರ್ಗದರ್ಶನ ಅತ್ಯಂತ ಅವಶ್ಯಕ. ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆಗಳಿಗೆ ಅಗತ್ಯ ಮಾನಸಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಡಾ. ಲಲಿತಾ ಭರತ್ ಹೇಳಿದರು.
ಶಿವಮೊಗ್ಗ ನಗರದ ವಾಸವಿ ಪಬ್ಲಿಕ್ ಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಹಾಗೂ ವಾಸವಿ ಫೌಂಡೇಶನ್ ವತಿಯಿಂದ “ಹದಿಹರೆಯದ ದುಗುಡ ದುಮ್ಮಾನ” ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಜೀವನದ ಪಯಣದಲ್ಲಿ ಮಗಳು, ಹೆಂಡತಿ, ಸೊಸೆ, ತಾಯಿ ಹೀಗೆ ತುಂಬಾ ಜವಾಬ್ದಾರಿಯುತ ಘಟ್ಟಗಳನ್ನು ಕ್ರಮಿಸುತ್ತಾಳೆ. ಎಲ್ಲಾ ಘಟ್ಟಗಳಲ್ಲಿ ನೋವು ನಲಿವು, ಬೇಸರ ಆತಂಕ ಎಲ್ಲವೂ ಸಹಜ. ಬಾಲ್ಯದ ಮುಗ್ಧತೆ ಕಳೆದು ಪ್ರೌಢಿಮೆಯು ಅರಿಯುವ ಸಮಯ. ಸಹಜವಾಗಿ ಎದುರಿಸುವಂತಹ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.
ಜೆಸಿಐ ಸಹ್ಯಾದ್ರಿ ಶಿವಮೊಗ್ಗದ ಅಧ್ಯಕ್ಷೆ ಸುಷ್ಮಾ ಹಿರೇಮಠ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ಸ್ವಸ್ಥ ಸದೃಢ ಸಮಾಜ ನಿರ್ಮಾಣವು ಸಾಧ್ಯ ಎಂಬ ನಿಟ್ಟಿನಲ್ಲಿ ವಾಸವಿ ಫೌಂಡೇಶನ್ ಮತ್ತು ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಎರಡು ಸಂಸ್ಥೆಗಳು ಕೈಜೋಡಿಸಿ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹದಿಹರೆಯದ ಸಮಸ್ಯೆಗಳ ಒಂದು ಕಥೆಯನ್ನು ರಚಿಸಿ ನಿರ್ದೇಶಿಸಿ ಆಟವನ್ನು ರಾಧಿಕಾ ಮಾಲತೇಶ್ ಸುಷ್ಮಾ ಅರವಿಂದ್ ನಡೆಸಿಕೊಟ್ಟರು. ವಾಸವಿ ಫೌಂಡೇಶನ್ ಅಧ್ಯಕ್ಷೆ ಸುಷ್ಮಾ ಅರವಿಂದ್ ಮತ್ತು ಜೆಸಿಐ ಸಹ್ಯಾದ್ರಿ ಶಿವಮೊಗ್ಗದ ಅಧ್ಯಕ್ಷೆ ಸುಷ್ಮಾ ಹಿರೇಮಠ ಉಪಸ್ಥಿತರಿದ್ದರು.