ಜೀವನದಲ್ಲಿ ಯಾವಾಗಲೂ ಸಿಕ್ಕ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು
ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.
ಚನ್ನಗಿರಿ ಪಟ್ಟಣದ ಚಿತ್ರದುರ್ಗ ರಸ್ತೆಯ ಆರ್‌ಎಚ್‌ಎಂ ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆದ ವಾಯ್‌ರಸ ಆಫ್ ನಮ್ಮ ಅಡಕೆ ನಾಡು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಮನೋವಿಕಾಸಕ್ಕೆ, ಪ್ರತಿಭೆ ಅನಾವರಣಕ್ಕೆ ಪೂರಕವಾಗುತ್ತವೆ. ಈ ನಿಟ್ಟಿನಲ್ಲಿ ಪೋಷಕರಾದ ನಾವು ಮಕ್ಕಳ ಹೊಣೆಗಾರಿಕೆ ಅರಿತು ಅವರನ್ನು ಬೆಳೆಸಬೇಕಿದೆ. ಅಲ್ಲದೇ ಅವರಲ್ಲಿನ ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಬೇಕಿದೆ ಎಂದರು.
ಸಂಗೀತ ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ. ಮಕ್ಕಳು ಹಾಡುವುದರಿಂದ ಮತ್ತು ಹಾಡನ್ನು ಕೇಳುವುದರಿಂದ ಮೆದುಳಲ್ಲಿ ಹೆಚ್ಚಿನ ಸಂಚಲನ ಮತ್ತು ಸಕ್ರೀಯತೆ ಉಂಟಾಗುವ ಮೂಲಕ ಶಾಂತತೆ ಮತ್ತು ಮೆಮೋರಿ ಪವರ್ ವೃದ್ಧಿಯಾಗುತ್ತದೆ ಎಂದು ಅಭಿಪಾಯಿಸಿದರು.
ಚನ್ನಗಿರಿ ಅಡಕೆಯ ನಾಡು, ರಾಜ್ಯದಲ್ಲಿ ಒಟ್ಟು ಮೂರು ಲಕ್ಷ ಹೆಕ್ಟೇರ್ ಅಡಕೆ ಬೆಳೆಯಲಾಗುತ್ತದೆ. ಶಿವಮೊಗ್ಗ , ಚಿಕ್ಕಮಗಳೂರು ಹಾಗೂ ದಾವಣಗೆರೆ ಮೊದಲು ಮೂರು ಸ್ಥಾನದಲ್ಲಿವೆ. ಚನ್ನಗಿರಿ ತಾಲೂಕಿನಲ್ಲಿ ಹೆಚ್ಚು ಅಡಕೆ ಬೆಳೆಯುವುದರಿಂದ ಆರ್ಥಿಕ ಉನ್ನತಿಯೂ ಕಾರಣವಾಗಿದೆ, ಇದರಿಂದಾಗಿ ಬಹುತೇಕರು ಸ್ಥಿತಿವಂತರಾಗಿದ್ದಾರೆ, ಇದು ದೇಶದ ಪ್ರಗತಿಗೂ ಕಾರಣವಾಗಿದೆ ಎಂದರು.
ಈ ಸಂದರ್ಭ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಡಿವೈಎಸ್‌ಪಿ ಡಾ.ಸಂತೋಷ್ , ಸದ್ಗುರು ಆಯುರ್ವೇದ ಕಂಪನಿಯ ಸಂಸ್ಥಾಪಕರಾದ ಪ್ರದೀಪ್, ದಾವಣಗೆರೆ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಮಾಡಾಳು ಮಲ್ಲಿಕಾರ್ಜುನ , ಗಾಯಕಿ ಸುರೇಖಾ ಹೆಗಡೆ, ಅಡಕೆ ನಾಡು ಗ್ರೂಪ್‌ನ ಸದಸ್ಯರಾದ ಆರ್.ಕೆ. ಕಿರಣ್ ರೇವಾಳ್, ಶಶಿ ಕಿರಣ್, ಗುರುಪ್ರಸಾದ್, ಕಿರಣ್ ಕೋರಿ, ಕೃಷ್ಣಮೂರ್ತಿ ಕಶ್ಯಪ್, ಕೀರ್ತಿ ಮತ್ತು ಮಧು ಹಾಜರಿದ್ದರು.