ಸಮಾಜದಲ್ಲಿ ಜವಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಹೇಳಿದರು.
ಶಿವಮೊಗ್ಗದ ಗೋಪಾಲ ಬಡಾವಣೆಯಲ್ಲಿರುವ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜವಬ್ದಾರಿ ಮರೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶೈಕ್ಷಣಿಕ ಹಂತದಲ್ಲಿಯೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಶುದ್ಧ ಚಾರಿತ್ಯ ತುಂಬಿದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಮಕ್ಕಳು ಪ್ರೌಢ ಹಂತಕ್ಕೆ ತಲುಪಿದಾಗ ಬೇರೆ ವಸ್ತುಗಳ ಕಡೆ ಬಹಳ ಬೇಗ ಆಕರ್ಷಿತರಾಗುತ್ತಾರೆ. ಈ ಹಂತದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದು ಸರಿದಾರಿಯಲ್ಲಿ ನಡೆದಾಗ ಮಾತ್ರ ಉತ್ತಮ ನಾಗರಿಕನಾಗಲು ಸಾಧ್ಯ. ಸಮಾಜದಲ್ಲಿ ಉತ್ತಮ ನಾಗರಿಕರ ಸಂಖ್ಯೆ ಹೆಚ್ಚಿದರೆ ಅಪರಾಧ ಕೃತ್ಯಗಳು ತಾನಾಗಿಯೇ ಕಡಿಮೆಯಾಗುತ್ತವೆ. ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳು ಜೀವನದಲ್ಲಿ ಸ್ಪಷ್ಟ ಗುರಿ ಉದೇಶ ಹೊಂದಿರುಬೇಕು. ಮಾದಕ ವಸ್ತುಗಳ ವಿರುದ್ಧ ಸ್ವಯಂ ನಿಯಂತ್ರಣ ಮಾಡಿಕೊಂಡಲ್ಲಿ ಇದಕ್ಕೆ ಬಲಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಕ್ಕೆ ಉತ್ತಮ ಕೊಡಗೆ ನೀಡಬೇಕು ಎಂದು ಕರೆ ನೀಡಿದರು.
ಪತ್ರಕರ್ತರ ಕಾರ್ಯ ಅರ್ಥಪೂರ್ಣ:
ನಾನು ಹಲವಾರು ಜಿಲ್ಲೆಗಳಲ್ಲಿ ಪತ್ರಕರ್ತರ ಸಂಘಗಳ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಆದರೆ, ಶಿವಮೊಗ್ಗ ಜಿಲ್ಲಾ ಕಾರ್ಯಕರ್ತರ ಸಂಘದ ಕಾರ್ಯಚಟುವಟಿಕೆ ಬಹಳ ವಿಭಿನ್ನವಾಗಿದೆ. ಪತ್ರಕರ್ತ ವೃತ್ತಿ ಜೊತೆಗೆ ಸಮಾಜ ಮುಖಿಕಾರ್ಯದಲ್ಲಿ ಸಂಘ ಭಾಗಿಯಾಗುತ್ತಿರುವುದು ನಿಜಕ್ಕೂ ಅರ್ಥಪೂರ್ಣ. ನಿಮ್ಮ ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯತ್ತಿದ್ದರೆ ಅಂತಹ ಘಟನೆಗಳನ್ನು ಪೋಲೀಸರ ಗಮನಕ್ಕೆ ತಂದರೆ ಸಮಾಜಘಾತಕ ಕೃತ್ಯಗಳನ್ನು ತಡೆಯಬಹುದು. ಪೊಲೀಸ್ ಇಲಾಖೆಗೆ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮಕ್ಕಳನ್ನು ಗಾಂಜಾದಂತ ಮಾದಕ ವಸ್ತುಗಳಿಂದ ದೂರ ಇರಿಸುವ ಜೊತೆಗೆ ಇತ್ತೀಚೆಗೆ ಮಾದಕ ವಸ್ತುವಿನಂತಾಗಿರುವ ಮೊಬೈಲ್‌ನಿಂದಲೂ ಮಕ್ಕಳನ್ನು ದೂರ ಇಡಬೇಕಾದರ ಸನ್ನಿವೇಶ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾನಿಕೇತನ ಕಾರ್ಯದರ್ಶಿ ಶೋಭಾ ವೆಂಕಟರಮಣ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಣ ಎಸ್.ಸಿ.ತೀರ್ಥೇಶ್ ಸ್ವಾಗತಿಸಿದರು, ವಿದ್ಯಾರ್ಥಿನಿ ವರ್ಷಿಣಿ ತಂಡ ಶ್ಲೋಕ ಹಾಡಿದರು, ಅನ್ಯನ್ಯ ಮತ್ತು ವಿಧಾತ್ರಿ ಪ್ರಾರ್ಥಿಸಿದರು, ಶಿಕ್ಷಕ ಕೆ.ಎಂ.ನಾಗರಾಜ್ ವಂದಿಸಿದರು.
