ಚಿಕ್ಕಮಗಳೂರು, ಮಾಜಿ ಮುಖ್ಯಮಂತ್ರಿ, ರೈತರ ಕಣ್ಮಣಿ ಹೆಚ್.ಡಿ.ಕುಮಾರಸ್ವಾಮಿ ಅವರ 64ನೇ ಜನ್ಮದಿನಾಚರಣೆಯನ್ನು ನಗರದ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಈ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದ ಗದ್ದೆ ಗಿರೀಶ್ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸಿದ ಅವರು ರೈತರು, ಬಡವರು, ದೀನ ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಉತ್ತಮ ಯೋಜನೆಗಳನ್ನು ರೂಪಿಸಿ ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದರು.
ದೇಶದ ಹಿರಿಯ ರಾಜಕೀಯ ಮುತ್ಸದ್ದಿಗಳು ನಿಬ್ಬೆರಗಾಗುವ ರೀತಿಯಲ್ಲಿ ಆಡಳಿತ ನೀಡಿ ಎಲ್ಲ ವರ್ಗದ ಜನಮನ ಗೆದ್ದ ಜನನಾಯಕರಾಗಿದ್ದಾರೆ. ಇದೀಗ ಪಂಚರತ್ನ ಯೋಜನೆಯ ಮೂಲಕ ನಾಡಿನ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ತಾಲ್ಲೂಕು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ಹೆಚ್.ಡಿ.ಕೆ. ಅವರು ಜನತೆಯ ಸಮಸ್ಯೆಯನ್ನು ಅರಿಯುವ ಸಲುವಾಗಿ ಬಡವರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುವ ಮೂಲಕ ಕಷ್ಟಗಳಿಗೆ ಸ್ಪಂದಿಸುವ ಕಾಯಕದಲ್ಲಿ ನಿರಂತರಾಗಿ ತೊಡಗಿದ್ದ ಮಹಾನಾಯಕ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಅಧಿಕಾರದ ಸಮಯದಲ್ಲಿ ಜನಪರ ಯೋಜನೆಗಳಾದ ಮಕ್ಕಳಿಗೆ ಸೈಕಲ್, ಉಚಿತ ಅಕ್ಕಿ, ವೃದ್ದಾಪ್ಯದಲ್ಲಿರುವವರಿಗೆ ವಿವಿಧ ಸವಲತ್ತುಗಳನ್ನು ನೀಡಿ ಜನಮನ್ನಣೆ ಗಳಿಸಿದ ಹಿರಿಯ ರಾಜಕೀಯ ಮುತ್ಸದಿ ಎಂದು ವರ್ಣಿಸಿದರು.
ಇದೇ ವೇಳೆ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೆಚ್‌ಎಸ್ ಮಂಜಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಮುಖಂಡರುಗಳಾದ ಡಿ.ಕೆ.ಚಂದ್ರೇಗೌಡ, ಸಿ.ಕೆ.ಮೂರ್ತಿ, ಹುಣಸೇಮಕ್ಕಿ ಲಕ್ಷಣ , ಆನಂದೇಗೌಡ, ಚಂದ್ರಶೇಖರ್, ಶ್ರೀಮತಿ ಜಯಂತಿ, ಚಂದ್ರಶೇಖರ್ ಶಶಿಕುಮಾರ್, ರಕ್ತನಿಧಿ ಕೇಂದ್ರದ ಡಾ|| ಮುರುಳಿಧರ್, ಸಿಬ್ಬಂದಿಗಳಾದ ದಿವಾಕರ್, ಮಧುರೈ ಹಾಜರಿದ್ದರು.