ಯೋಜನೆಗಳ ರೂಪಿಸುವಿಕೆಯಲ್ಲಿ ಸಮಾಜ ವ್ಯವಸ್ಥೆಯ ವಸ್ತುನಿಷ್ಠ ಅಧ್ಯಯನ ಅತ್ಯವಶ್ಯ” -ಸಮಾಜಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದಲ್ಲಿ ಎಚ್. ಬಿ. ಮಂಜುನಾಥ- ದಾವಣಗೆರೆ.ಡಿ.9. ಜನಪರವಾದ ಯಾವುದೇ ಯೋಜನೆಗಳನ್ನು ರೂಪಿಸುವ ಪೂರ್ವದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿನ ಸ್ಥಿತಿಗತಿ ಹಾಗೂ ಸಮಸ್ಯೆಗಳ ವಸ್ತುನಿಷ್ಠ ಅರಿವು ಅತ್ಯವಶ್ಯ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು.
ಅವರಿಂದು ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಏರ್ಪಾಡಾಗಿದ್ದ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿಗಳಾಗಿ ಪ್ರಧಾನ ಭಾಷಣ ನೀಡುತ್ತಾ ಸಮಾಜಶಾಸ್ತ್ರವೆಂದರೆ ಸಮಾಜದ ಹಾಗೂ ಮಾನವ ಜೀವಿಯ ಸಾಮಾನ್ಯ ವರ್ತನೆಗಳ, ಗುಣಲಕ್ಷಣಗಳ ವ್ಯವಸ್ಥಿತ ಅಧ್ಯಯನ ವಾಗಿದ್ದು ಇದರಿಂದ ವ್ಯವಸ್ಥೆಯ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಕೈಗಾರಿಕಾ, ಶೈಕ್ಷಣಿಕ, ಔದ್ಯೋಗಿಕ, ಆಧ್ಯಾತ್ಮಿಕ ಮುಂತಾಗಿ ಎಲ್ಲ ರಂಗಗಳ ಸಮಸ್ಯೆಗಳನ್ನು ತಿಳಿದು, ಅಪರಾಧಗಳನ್ನು ಕಡಿಮೆಗೊಳಿಸಿ, ಸುಧಾರಣೆ ತರಲು ಯೋಜನೆಗಳನ್ನು ರೂಪಿಸಲು ಸಮಾಜಶಾಸ್ತ್ರ ದಿಂದ ಸಾಧ್ಯವಿದ್ದು ಸಮಾಜಶಾಸ್ತ್ರ ವಿದ್ಯಾರ್ಥಿಗಳು ಕೇವಲ ಪಠ್ಯವಾಗಿ ಸ್ವೀಕರಿಸಿ ಪರೀಕ್ಷೆ ಬರೆದು ಪದವಿಗಳಿಸಿ ಉದ್ಯೋಗಿಗಳಾದರೆ ಸಾಲದು.
0ಸಮಾಜ ಶಾಸ್ತ್ರ ವಿದ್ಯಾರ್ಥಿಗಳು ದೇಶದ ಯೋಜನೆಗಳ ರೂಪಿಸುವಿಕೆಗೆ ಪ್ರೇರಕವಾದ ಪೂರಕವಾದ ಅಂಶಗಳನ್ನು ಕೊಡುವುದರೊಂದಿಗೆ ಭಾರತ ದೇಶವು ಭವಿಷ್ಯದಲ್ಲಿ ಐದು ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಸಮಾಜ ಶಾಸ್ತ್ರ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪ್ರೇರಣೆ ಬರುವಂತೆ ಉಪನ್ಯಾಸಗಳನ್ನು ಮಾಡಬೇಕು ಎಂದ ಮಂಜುನಾಥ್ ನಮ್ಮ ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳಲ್ಲಿ ಬರುವ ಅನೇಕ ವಿಚಾರಗಳು ಈಗಿನ ಸಮಾಜಶಾಸ್ತ್ರದ ಪಠ್ಯದಲ್ಲಿನ ಅಂಶಗಳಿಗೆ ಯೋಗ್ಯ ನಿದರ್ಶನಗಳನ್ನು ಒದಗಿಸುತ್ತವೆ, ಆದ್ದರಿಂದ ಸಮಾಜಶಾಸ್ತ್ರ ಉಪನ್ಯಾಸಕರು ಇವುಗಳ ವಸ್ತುನಿಷ್ಠ ಅಧ್ಯಯನವನ್ನು ಸಹ ಮಾಡಿ ಆಸಕ್ತಿದಾಯಕವಾಗಿ ವಿದ್ಯಾರ್ಥಿಗಳಿಗೆ ಅವುಗಳನ್ನು ತಿಳಿಸಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದಾವಣಗೆರೆ ಉಪನಿರ್ದೇಶಕ ಎಂ ಶಿವರಾಜುರವರು ಸಮಾಜಶಾಸ್ತ್ರ ವಿಷಯಕ್ಕೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಹೇಳಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಅಧ್ಯಕ್ಷ ಬಿ ಪಾಲಾಕ್ಷಿಯವರು ಪ್ರತಿಯೊಬ್ಬ ಸಮಾಜಶಾಸ್ತ್ರ ವಿದ್ಯಾರ್ಥಿಯೂ ಓರ್ವ ಸಮಾಜ ಸುಧಾರಕನಂತೆ ಹೊರ ಹೊಮ್ಮಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ಸಂಘದ ಅಧ್ಯಕ್ಷರಾದ ಸಿ ಬಿ ರವಿ, ಮಾಗನೂರು ಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಪ್ರಸಾದ್ ಬಂಗೇರ ಮಾತುಗಳ ನಾಡಿದರು ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಆರ್ ಸುರೇಶ್ ಅಧ್ಯಕ್ಷೀಯ ನುಡಿಗಳ ನಾಡಿದರು ಮಾಗನೂರು ಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಜಿ ಎನ್ ಎಚ್ ಕುಮಾರ್ ಉಪಸ್ಥಿತರಿದ್ದು ಸಂಪನ್ಮೂಲ ವ್ಯಕ್ತಿಗಳಾದ ಪ್ರಾಧ್ಯಾಪಕ ಕೆಬಿ ರಂಗಪ್ಪ ಸಹಾಯಕ ಪ್ರಾಧ್ಯಾಪಕಿ ಡಾ. ಲತಾ ಎಸ್ಎಂ ಉಪನ್ಯಾಸ ನೀಡಿದರು ನಿವೃತ್ತ ಉಪನ್ಯಾಸಕರಿಗೆ ಹಾಗೂ ಮುಂಬಡ್ತಿ ಪಡೆದ ಉಪನ್ಯಾಸಕರುಗಳಿಗೆ ಸನ್ಮಾನ ನೀಡಲಾಯಿತು .