ಶಿವಮೊಗ್ಗೆಯ ಭಾರತ್ ಸಿನಿಮಾಸ್, ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಿತ್ರ ಪ್ರಾಯಶಃ ಡಿ.09ರಂದು ಪ್ರದರ್ಶನಗೊಳ್ಳಲಿದೆ.
ರಂಜಿತ್ ರಾವ್ ಈ ಸಿನಿಮಾದ ನಿರ್ದೇಶಕ.
ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಹುಡುಗ. ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಇದ್ದ ಆಸಕ್ತಿಯಿಂದಾಗಿ ಶಾಲಾ, ಕಾಲೇಜಿನ ದಿನಗಳಲ್ಲಿ ಕಥೆ, ಕವಿತೆ, ಹಾಡುಗಳನ್ನು ಬರೆಯುತ್ತಾ, ನಾಟಕಗಳಲ್ಲಿ ಭಾಗವಹಿಸುತ್ತಾ ಸಿಕ್ಕ ಅವಕಾಶಗಳನ್ನು ಪಡೆದುಕೊಂಡವರು.
ಇಂಜಿನಿಯರಿಂಗ್ ಓದುತ್ತಿದ್ದರೂ ಮನಸ್ಸು ಮಾತ್ರ ಹಾಡು, ಸಿನಿಮಾಗಳ ಕಡೆಗೆ ವಾಲುತ್ತಿತ್ತು.
ಸಿನಿಮಾಲೋಕಕ್ಕೆ ಯಾವುದೇ ಹಿನ್ನೆಲೆಯಿಲ್ಲದೇ ಬರುವುದು ಕಷ್ಟ ಎಂದು ಗೊತ್ತಿದ್ದರೂ ಪ್ರಯತ್ನ ಬಿಡಲಿಲ್ಲ. ಪರಿಚಯದವರ ಸಹಾಯವನ್ನು ಪಡೆದು ಸೈಯದ್ ಅಶ್ರಫ್ ಎಂಬ ಕಿರುತೆರೆಯ ಹೆಸರಾಂತ ನಿರ್ದೇಶಕರ ಬಳಿ ಕೆಲಸ ಗಿಟ್ಟಿಸಿಕೊಂಡರು.
ನಂತರ ಸುರೇಶ್ ರಾವ್, ಎಂ.ಎನ್.ಜಯಂತ್ ರವರು ರಂಜಿತ್‌ರಾವ್ ರವರ ಪ್ರತಿಭೆಯನ್ನು ಗುರುತಿಸಿ ಅವಕಾಶವನ್ನು ಕೊಟ್ಟರು. ಸಿಕ್ಕ ಅವಕಾಶವನ್ನು ಪಡೆದುಕೊಂಡು ಸಂಚಿಕೆ ನಿರ್ದೇಶಕರಾಗಿ, ಮುಖ್ಯ ನಿರ್ದೇಶಕರಾಗಿ ಧಾರಾವಾಹಿಗಳನ್ನು ನಿರ್ದೇಶಿಸಿ ಜನಮನ್ನಣೆ ಗಳಿಸುವ ಮಟ್ಟಕ್ಕೆ ಬೆಳೆದ ಇವರು, ಕಿರುತೆರೆಯಲ್ಲಿ ನಿರ್ದೇಶಿಸಿದ ಅಂಬಾರಿ, ಅರಮನೆ, ಜೊತೆಜೊತೆಯಲ್ಲಿ (ಮೊದಲ ಸರಣಿ) ಧಾರಾವಾಹಿಗಳು ಜನರಿಗೆ ಹತ್ತಿರವಾದವು.
ಆ ಸಮಯದಲ್ಲೇ ಬಿಡುವು ಮಾಡಿಕೊಂಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುತ್ತಾ ಹೋದರು.
ಆಗ ಜನ್ಮ ತಾಳಿದ ಚಿತ್ರವೇ ‘ಪ್ರಾಯಶಃ’. ರಂಜಿತ್‌ರವರು ತಮ್ಮ ಮೊದಲ ಪ್ರಯತ್ನದಲ್ಲೇ ಒಂದು ಕುತೂಹಲಕಾರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮಾಡಿದ್ದಾರೆ.
ಅರ್ಹ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಿ, ನಿರ್ದೇಶಿಸುವ ಸಾಹಸಕ್ಕೆ ಕೈಹಾಕಿದ ಶಿವಮೊಗ್ಗದ ರಂಜಿತ್ ರಾವ್ ಮುಖದಲ್ಲಿ ಭರವಸೆ ಮೂಡಿದೆ.
ಪ್ರಾಯಶಃ ಚಿತ್ರದ ಮುಖ್ಯ ತಾರಾಗಣದಲ್ಲಿ ರಾಹುಲ್ ಅಮೀನ್, ಕೃಷ್ಣಾ ಭಟ್, ವಿಜಯ್ ಶೋಭರಾಜ್ ಪಾವೂರ್, ಮಧು ಹೆಗಡೆ, ವಿನೀತ್, ಶನಿಲ್ ಗುರು ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ರಂಜಿತ್ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಮೂರು ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ. ರಂಜಿತ್ ರಾವ್ ನಿರ್ಮಾಣ, ನಿರ್ದೇಶನದ ‘ಪ್ರಾಯಶಃ’ ಡಿಸೆಂಬರ್ 09 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಶಿವಮೊಗ್ಗೆಯ ಭಾರತ್ ಸಿನಿಮಾಸ್, ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತೆರೆಗೆ ಬರುತ್ತಿದೆ.
ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಕೋರಲಾಗಿದೆ. ಕೊಲೆಯ ಸುತ್ತ ನಡೆಯುವ ಕಥೆಯಲ್ಲಿ ಆರಂಭದಲ್ಲಿ ಕೊಲೆಗಾರ ಪತ್ತೆಯಾಗುತ್ತಾನೆ. ಅಲ್ಲಿಂದ ನಿಜವಾದ ಕುತೂಹಲ ಆರಂಭವಾಗುತ್ತದೆ. ಕೊಲೆ ಮಾಡಿದವನು ಎಂದು ನಂಬುವಾಗ ಮತ್ತೊಬ್ಬ ಇರಬೇಕು ಅನಿಸುತ್ತದೆ. ಮಗದೊಮ್ಮೆ ಮತ್ತೊಬ್ಬ ಇರಬೇಕು ಎಂದು ಅನಿಸುತ್ತದೆ. ‘ಪ್ರಾಯಶಃ’ ಚಿತ್ರ ಹೀಗಿರಬಹುದು, ಹೀಗಾಗಿರಬಹುದು ಎಂಬ ಊಹೆಯನ್ನು ಸೃಷ್ಟಿಸಿರುತ್ತದೆ. ಘಟನೆಗಳು ರೋಚಕವಾಗಿದ್ದು, ಊಹೆಗಳು ರೋಚಕವಾಗುತ್ತಾ ಹೋಗುತ್ತದೆ. ಜನರಲ್ಲಿ ಕಲ್ಪಿತ ಕಥೆ ಹೊರಬರಲು ಆರಂಭಿಸುತ್ತದೆ. ಹೀಗೇ ಸತ್ಯವಾಗಲಿ ಎಂದು ಬಯಸುತ್ತಾರೆ. ಒಂದು ಹಂತ ದಾಟಿದ ನಂತರ ತಮ್ಮ ಊಹೆಗಳನ್ನೇ ಸತ್ಯವೆಂದು ಬಿಂಬಿಸಲು ಆರಂಭಿಸುತ್ತಾರೆ. ಪ್ರಾಯಶಃ ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ.
ಪ್ರಾಯಶಃ ಘಟನೆಯ ಮೂಲ ಸತ್ಯದ ಸುತ್ತ ಕೋಟೆ ಕಟ್ಟುತ್ತಲೇ ಹೋಗುತ್ತದೆ, ಸತ್ಯ ಯಾರಿಗೂ ಕಾಣಿಸದಂತೆ. ಈ ಚಿತ್ರ ನೋಡುವಾಗ ಪ್ರೇಕ್ಷಕನಿಗೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೊನೆಯ 40 ನಿಮಿಷಗಳ ಕಾಲ ರಿವರ್ಸ್ ಸನ್ನಿವೇಶದಲ್ಲಿ ಚಿತ್ರಕತೆ ಸಾಗುತ್ತದೆ. ಈ ಕಾನ್ಷೆಪ್ಟ್ ಮೇಲೆ ಚಿತ್ರ ಮಾಡಲಾಗಿದೆ. ಇದರ ಹಾಡುಗಳ ಮಿಕ್ಸಿಂಗ್ – ಮಾಸ್ಟರಿಂಗ್ ಲಂಡನ್‌ನಲ್ಲಿ ಮಾಡಲಾಗಿದೆ.