ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರದಲ್ಲಿರುವ 4 ಆನೆಗಳು ಸೇರಿ 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಲು ತಯಾರಿ ನಡೆದಿದೆ.
ಮಧ್ಯಪ್ರದೇಶದಲ್ಲಿ ಹುಲಿಗಳ ಸೆರೆ ಕಾರ್ಯಾಚರಣೆಗೆ ಆನೆಗಳ ಬಳಕೆ ಮಾಡಲು ಕರ್ನಾಟಕದಿಂದ ಅನೆಗಳನ್ನು ಕಳುಹಿಸಲು ಅಲ್ಲಿನ ಸರ್ಕಾರ ಕೋರಿದ್ದು, ಅದರನ್ವಯ 12 ಗಂಡು ಹಾಗೂ ಎರಡು ಹೆಣ್ಣು ಆನೆಗಳ ಈ ತಂಡವನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಆದೇಶ ಪತ್ರ ಇಲ್ಲಿನ ಆನೆ ಬಿಡಾರದ ಆಡಳಿತಕ್ಕೆ ತಲುಪಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿ ಇರುವ ರವಿ (25), ಶಿವಾ (06), ಮಣಿಕಂಠ (35), ಬೆಂಗಳೂರಿನ ಗಣೇಶ (36), ರಾಮಪುರದ ಬಂಡೀಪುರ ಹುಲಿ ಅಭಯಾರಣ್ಯದ ಗಣೇಶ (17), ಕೃಷ್ಣ (21), ಗಜ (07), ಮರ್ಸಿಹಾ (07), ಪೂಜಾ (09), ಮಡಿಕೇರಿಯಲ್ಲಿರುವ ದುಬಾರೆ ಆನೆ ಬಿಡಾರದಿಂದ ಜನರಲ್ ತಿಮ್ಮಯ್ಯ (08), ಜನರಲ್ ಕಾರಿಯಪ್ಪ (08), ವಲ್ಲಿ (40), ಲವ (21) ಹಾಗೂ ಮಾರುತಿ (20) ಆನೆಗಳು ಮಧ್ಯಪ್ರದೇಶಕ್ಕೆ ತೆರಳಲಿವೆ.
ಮಧ್ಯಪ್ರದೇಶದಿಂದ ಬಂದಿದ್ದ ಅರಣ್ಯಾಧಿಕಾರಿ ಹಾಗೂ ವೈದ್ಯಾಧಿಕಾರಿ ತಂಡ ರಾಜ್ಯದ ಆನೆ ಬಿಡಾರದ ಆನೆಗಳ ಆರೋಗ್ಯ ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಬಹುದಾದ ಸಾಧ್ಯತೆ ಪರಿಶೀಲಿಸಿ ಆನೆಗಳ ಪಟ್ಟಿ ಕೊಟ್ಟಿದ್ದರು.
