ಮೈಂಡ್‌ಟ್ರೀ ಕಂಪನಿಯ ಸಿಇಒ ದೇವಶಿಶ್ ಚಟರ್ಜಿ ಮತ್ತು ಅಜೀಂ ಪ್ರೇಂಜಿ ವಿಶ್ವ ವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ. ಅನುರಾಗ್ ಬೆಹಾರ್ ಸೇರಿದಂತೆ ಹತ್ತು ತಜ್ಞರನ್ನು ಮುಂದಿನ ಐದು ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಿಕ್ಕಂತೆ ವಿಶಾಖಪಟ್ಟಣ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ ವಿ ಕಟ್ಟೀಮನಿ, ಕುವೆಂಪು ವಿವಿ ನಿವೃತ್ತ ಕುಲಪತಿ ಜೋಗಿನ್ ಶಂಕರ್, ಅಕ್ಕಮಹಾದೇವಿ ವಿವಿ ನಿವೃತ್ತ ಕುಲಪತಿ ಮೀನಾ ಚಂದಾವರ್ಕರ್, ಐಸಿಎಸ್‌ಎಸ್‌ಆರ್ ನಿರ್ದೇಶಕಿ ಪ್ರೊ. ಉಷಾರಾಣಿ, ಎಂಎಆರ್ಸಿಕೆ ಲೈಫ್ ಸೈನ್ಸಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ಎಸ್ ಶ್ರೀನಾಥ್, ಕ್ವಿಸ್ಟ್ ಗ್ಲೋಬಲ್ ಕಂಪನಿಯ ಅಧ್ಯಕ್ಷ ಅಜಯ್ ಪ್ರಭು ಮತ್ತು ಬಾಶ್ ಗ್ಲೋಬಲ್ ಸಾಫ್ಟ್‌ವೇರ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ರಾಘವೇಂದ್ರ ಕೃಷ್ಣಮೂರ್ತಿ ಅವರನ್ನು ಉನ್ನತ ಶಿಕ್ಷಣ ಪರಿಷತ್ತಿಗೆ ನಾಮನಿರ್ದೇಶಕ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉದ್ಯಮದ ಪ್ರಮುಖರನ್ನು ಶಿಕ್ಷಣ ಕ್ಷೇತ್ರದ ಜೊತೆ ಜೋಡಿಸುವ ಉದ್ದೇಶದಿಂದ ಈ ಬಾರಿ ಪರಿಷತ್ತಿಗೆ ಉದ್ಯಮಿಗಳನ್ನೂ ನೇಮಿಸಲಾಗಿದೆ.