ನಾಲ್ಕು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನೌಕರರ ವಿರುದ್ಧ ತನಿಖೆ ನಡೆಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕರ್ನಾಟಕ ನಾಗರೀಕ ಸೇವೆಗಳ ಅಧಿನಿಯಮದ ನಿಯಮ 214ರ 2(ಬಿ) (ಜಿಜಿ) ಪ್ರಕಾರ ಇದಕ್ಕೆ ಅವಕಾಶವಿಲ್ಲವೆಂಬುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಗೃಹ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅನಿಲ್ ಕುಮಾರ್ ಹಾಗೂ ಟಿ. ಮಲ್ಲಣ್ಣ ವಿರುದ್ಧ 2006ರಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022ರ ಜೂನ್ 21ರಂದು ಮೆಮೋ ಜಾರಿಗೊಳಿಸಲಾಗಿತ್ತು.
ಆದರೆ ಅನಿಲ್ ಕುಮಾರ್ 2018ರ ಜೂನ್ 30ರಂದು ನಿವೃತ್ತಿಯಾಗಿದ್ದರೆ, ಮಲ್ಲಣ್ಣ 2020 ರ ಆಗಸ್ಟ್ 30 ರಂದು ನಿವೃತ್ತರಾಗಿದ್ದರು. ಹೀಗಾಗಿ 2006 ರಂದು ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಈಗ ಮೆಮೋ ನೀಡಲಾಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆಗೆ ಅವಕಾಶವಿಲ್ಲವೆಂದು ತೀರ್ಪು ಪ್ರಕಟಿಸಿದೆ.