ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಕುಮಟಾ 2000ರಲ್ಲಿ ಅಕ್ಟೋಬರ್ 02 ಪ್ರಾರಂಭಗೊಂಡಿತು.
ಕಳೆದ 20 ವರ್ಷಗಳಲ್ಲಿ ಹಲವಾರು ತರಬೇತಿಗಳನ್ನು ನೀಡುತ್ತಾ ಬಂದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು 2000 ದಿಂದ 2022 ರವರೆಗೆ ಸುಮಾರು 18 ರಿಂದ 20 ಸಾವಿರ ಜನರಿಗೆ ತರಬೇತಿಯನ್ನು ನೀಡಿದೆ.
ಗ್ರಾಮೀಣ ಭಾಗದಲ್ಲಿರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗದ ಕುರಿತು ತರಬೇತಿ ನೀಡಿ ಅವರನ್ನ ಉದ್ಯಮಶೀಲರನ್ನಾಗಿ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಯಾರು ಕೂಡ ಉದ್ಯೋಗ ವಂಚಿತರಾಗದಿರಲಿ ಎಂಬ ಮುಖ್ಯ ಉದ್ದೇಶದಿಂದ ಈ ಸಂಸ್ಥೆಯು ಪ್ರಾರಂಭಗೊಂಡಿತು. ಇಂದಿನ ಯುಗದಲ್ಲಿ ಸರ್ಕಾರಿ ಕೆಲಸ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನರು ಸ್ವ ಉದ್ಯೋಗದ ಮೂಲಕ ಬದುಕನ್ನ ರೂಪಿಸಿಕೊಳ್ಳಲು ಈ ಸಂಸ್ಥೆಯು ನೆರವಾಗುತ್ತಿದೆ.
ಈ ತರಬೇತಿ ಕೇಂದ್ರದ ಅಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೆನರಾ ಬ್ಯಾಂಕ್ ನ ಪ್ರಯೋಜಿತದಲ್ಲಿ ಈ ಸಂಸ್ಥೆಯು ಬೆಳೆಯುತ್ತಿದೆ.
ಇಲ್ಲಿ ತರಬೇತಿಯನ್ನ ಪಡೆಯಲು 18 ವರ್ಷ ಮೇಲ್ಪಟ್ಟ 45 ವರ್ಷದ ನಿರುದ್ಯೋಗ ಯುವಕ ಯುವತಿಯರು ಅರ್ಹರಾಗಿರುತ್ತಾರೆ.
ಈ ತರಬೇತಿ ಸಂಸ್ಥೆಯಲ್ಲಿ ಮಿಕ್ಸಿ ರಿಪೇರಿ, ಟಿವಿ ರಿಪೇರಿ, ಬ್ಯೂಟಿಷಿಯನ್ ಕೋರ್ಸ್, ಟೈಲರಿಂಗ್, ಕೋಳಿ ಸಾಕಾಣಿಕೆ, ಕಂಪ್ಯೂಟರ್ ಟ್ಯಾಲಿ, ಸೇರಿದಂತೆ ಇನ್ನೂ ಅನೇಕ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ.
ಗ್ರಾಮೀಣ ಭಾಗದಲ್ಲಿರುವ ಬಿಪಿಎಲ್ ಕಾರ್ಡ್ ದಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಈಗಾಗಲೇ ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಶೇ. 70%ಕ್ಕೂ ಹೆಚ್ಚು ಜನರು ಸ್ವಉದ್ಯೋಗವನ್ನು ಪ್ರಾರಂಭಿಸಿದ್ದಾರೆ.
ಇಲ್ಲಿ ತರಬೇತಿ ಪಡೆದ ಹಲವರು ಗ್ರಾಮೀಣ ಭಾಗದ ಅನೇಕ ಜನರಿಗೆ ತರಬೇತಿ ನೀಡಿದ್ದಾರೆ.
ತರಬೇತಿಯ ನಂತರದಲ್ಲಿ ತರಬೇತಿದಾರರು ಸ್ವಉದ್ಯೋಗ ಪ್ರಾರಂಭಿಸಲು ಇಚ್ಚಿಸಿದಾಗ ಹಣಕಾಸಿನ ಸಮಸ್ಯೆ ಎದುರಾದಲ್ಲಿ ಅವರು ಯಾವ ಬ್ಯಾಂಕಿನಲ್ಲಿ ವ್ಯವಹರಿಸುತ್ತಾರೋ ಅಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಕೇಂದ್ರದ ವತಿಯಿಂದ ಶಿಫಾರಸು ಮಾಡಲಾಗುತ್ತದೆ.