ಕಂದಾಯ ಭೂಮಿ ನೋಂದಣಿಯ ಅನಂತರ ಇನ್ನು ಮುಂದೆ ಏಳು ದಿನಗಳಲ್ಲಿ ಖಾತೆ ಮತ್ತು ಪಹಣಿ ಬದಲಾವಣೆಯಾಗಲಿದೆ.
ಪ್ರಸ್ತುತ ಜಮೀನು ಖರೀದಿ ಮಾಡಿದವರು ಖಾತೆ ಮತ್ತು ಪಹಣಿ ಗಾಗಿ 34 ದಿನ ಕಾಯುವುದು ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ.
ಇದನ್ನು ತಪ್ಪಿಸಲು ನೂತನ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಜಮೀನು ಖರೀದಿ ಮಾಡಿದವರು ಖಾತೆ ಬದಲಾವಣೆಗೆ ಕಾಯುವುದನ್ನು ತಪ್ಪಿಸುವುದಕ್ಕಾಗಿ ಏಳು ದಿನಗಳಲ್ಲಿ ಖಾತೆ ಹಾಗೂ ಪಹಣಿ ಮಾಡಿಕೊಡುವಂತೆ ಸದ್ಯದಲ್ಲೇ ಆದೇಶ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಇದರಿಂದ ರಾಜ್ಯಾದ್ಯಂತ ಜಮೀನು ಖರೀದಿದಾರರು ಏಳು ದಿನಗಳಲ್ಲಿ ಖಾತೆ ಪಡೆದು ಸಾಲ ಹಾಗೂ ಇತರ ದಾಖಲೆ ಪಡೆಯಲು ಅನುಕೂಲವಾಗಲಿದೆ. ಜತೆಗೆ ತಿಂಗಳುಗಟ್ಟಲೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಹಾಗೂ ವಿವೇಕಾನಂದ ಗಿರಿಜನ ಆಶ್ರಮ ಶಾಲೆಯ ಡಾ| ಬಾಲಸುಬ್ರಹ್ಮಣ್ಯ ಅವರ ಪ್ರೇರಣೆಯಿಂದ ಮುಂದಿನ ಬಾರಿ ಹಾಡಿಯಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಲಾಗಿದೆ.
ಜನವರಿಯಲ್ಲಿ ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಗದಗ, ಬೆಳಗಾವಿ, ಚಿತ್ರದುರ್ಗ ಸೇರಿ ಎಂಟು ಜಿಲ್ಲೆಗಳ 50 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದು ಲಕ್ಷ ಎಕರೆ ಕಾಫಿ ತೋಟ ಒತ್ತುವರಿಯಾಗಿದ್ದು, ಸ್ವಾಧೀನ ದಲ್ಲಿರುವವರಿಗೆ ಎಕರೆಗೆ ಇಂತಿಷ್ಟು ವಾರ್ಷಿಕ ತೆರಿಗೆ ನಿಗದಿ ಮಾಡಿ 30 ವರ್ಷಗಳ ಕಾಲ ಗುತ್ತಿಗೆಗೆ ನೀಡುವ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸ ಲಾಗುವುದು ಎಂದು ಆರ್. ಅಶೋಕ್ ತಿಳಿಸಿದರು.
ಈ ಮೂರು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಜಮೀನನ್ನು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದು, ಈಗ ಸ್ವಯಂಪ್ರೇರಿತರಾಗಿ ತಾವು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ನೀಡಿ 30 ವರ್ಷಗಳ ಕಾಲ ಗುತ್ತಿಗೆಗೆ ಸರಕಾರದಿಂದಲೇ ಪಡೆಯಲಿದ್ದಾರೆ ಎಂದರು.