ರಾಜ್ಯದಲ್ಲಿ ಚುಮು ಚುಮು ಚಳಿಯ ವಾತಾವರಣವಿದೆ. ಆದರೆ ನವೆಂಬರ್ 22ರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು ಕಳೆದ ವಾರ ರಾಜ್ಯದಲ್ಲಿ ಮಳೆಯಾಗಿತ್ತು. ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದಿತ್ತು. ಬಳಿಕ ಮೋಡ ಕವಿದ ವಾತಾವರಣ, ಚಳಿ ಮುಂದುವರೆದಿತ್ತು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ನವೆಂಬರ್ 22ರ ಮಂಗಳವಾರದಿಂದ ಮಳೆಯಾಗಲಿದೆ. ಇದರಿಂದಾಗಿ ಚಳಿ ಒಂದೆರಡು ದಿನ ಕಡಿಮೆಯಾಗುವ ಸಾಧ್ಯತೆ ಇದೆ.
ಯಾವ ಜಿಲ್ಲೆಗಳಲ್ಲಿ ಮಳೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಅನ್ವಯ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಚಳಿ ಸಹ ಮುಂದುವರೆಯಲಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಮೈಸೂರು, ತುಮಕೂರು, ಹಾವೇರಿಯಲ್ಲಿಯೂ ಮಂಗಳವಾರದಿಂದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಇದೆ. ಅಲ್ಲದೇ ಭಾರೀ ಇಬ್ಬನಿಯೂ ಸುರಿಯುತ್ತಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿಯೂ ಮಳೆಯಾಗಲಿದೆ. ಪುದುಚೇರಿ ಮತ್ತು ಚೆನ್ನೈನಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.