ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆಗೆ ಈ ಬಾರಿ ರಾಜ್ಯ ಅರಣ್ಯ ಇಲಾಖೆಯು ಭಾರಿ ನಿರ್ಬಂಧಗಳನ್ನು ವಿಧಿಸಿದೆ.
ಜಾನುವಾರು, ಎತ್ತಿನಗಾಡಿಗಳು, ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಸೇರಿದಂತೆ ಹಲವು ಆದೇಶಗಳನ್ನು ಜಾರಿಗೊಳಿಸುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬೇಲದಕುಪ್ಪೆ ದೇವಾಲಯದ ವಾರ್ಷಿಕ ಜಾತ್ರೆಯ ಕುರಿತು ಸರ್ಕಾರದಿಂದ ಸ್ಥಿತಿ ವರದಿಯನ್ನು ಕೋರಿತ್ತು. ಇದರ ನಂತರ, ರಾಜ್ಯ ಅರಣ್ಯ ಇಲಾಖೆಯು ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಹೇಳಿದೆ.
ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಸ್ಥಾನವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಹುಲಿ ಆವಾಸಸ್ಥಾನವನ್ನು ರೂಪಿಸುವ ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇವಾಲಯದಲ್ಲಿ 2020 ಮತ್ತು 2021 ರಲ್ಲಿ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆ ಈ ಬಾರಿಯ ಜಾತ್ರೆ ಬಾರಿಯ ಜಾತ್ರೆ ಅದ್ಧೂರಿಯಾಗಲಿದೆ ಎಂದು ಅಂದಾಜಿಸಾಗಿದೆ.
ನವೆಂಬರ್ 20 ರಿಂದ 23 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಪೂರ್ವಭಾವಿಯಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಅವರು ಮಂಗಳವಾರ ದೇವಾಲಯದ ಸ್ಥಳವನ್ನು ಪರಿಶೀಲಿಸಿದ್ದಾರೆ. ಜೊತೆಗೆ ದೇವಾಲಯದ ಟ್ರಸ್ಟಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಪ್ರತಿವರ್ಷ ಜಾತ್ರೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನ ಸೇರುತ್ತಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವವರು ಹೆಚ್ಚಿನವರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಾತ್ರೆ ಸಮಯದಲ್ಲಿ ಬೆಂಗಳೂರು, ಮಂಡ್ಯ ಮುಂತಾದ ಕಡೆಯಿಂದ ಜನರು ಸೇರುತ್ತಾರೆ.