ಜಿಲ್ಲಾ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರೊಂದಿಗೆ ಡಿಎಆರ್ ಸಭಾಂಗಣದಲ್ಲಿ ಸಭೆ ನಡೆಸಿದರು.
ಈ ವೇಳೆ ಅಧಿಕಾರಿಗಳು ಬಸ್ ಮಾಲೀಕರಿಗೆ ಎಂಟು ಪ್ರಮುಖ ಸೂಚನೆ ನೀಡಿದ್ದಾರೆ. ಇವುಗಳನ್ನು ಪಾಲಿಸದೆ ಇದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿದ ಎಂಟು ಸೂಚನೆಗಳು
- ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ತಪಾಸಣೆ ವೇಳೆ ಸಮವಸ್ತ್ರ ಧರಿಸದೆ ಇರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಚಾಲಕರು ಹಾಗೂ ನಿರ್ವಾಹಕರುಗಳು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು. ತೊಂದರೆಯಾಗದಂತೆ ನಡೆದುಕೊಳ್ಳಬೇಕು.
- ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವೇಗ ಮಿತಿ ಹಾಗೂ ಸಂಚಾರ ನಿಯಮ ಕಡ್ಡಾಯವಾಗಿ ಚಾಲಕರು ಹಾಗೂ ನಿರ್ವಾಹಕರುಗಳು ಪಾಲಿಸಬೇಕು.
- ಬಸ್‌ಗಳನ್ನು ನಗರದ ಎಲ್ಲೆಂದರಲ್ಲಿ ನಿಲ್ಲಿಸದೆ ನಿಗದಿಪಡಿಸಿದ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು.
- ಬಸ್‌ಗಳಲ್ಲಿ ಸರಕು ಸಾಗಾಣಿಕೆಯ ಸಂದರ್ಭ ನಿಗಾ ವಹಿಸಬೇಕು. ಅನುಮಾನಾಸ್ಪದ ಸರಕುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
- ಸಾರ್ವಜನಿಕರ ಸುರಕ್ಷಿತ ನಿಯಮ ಪ್ರಕಾರ ಶಿವಮೊಗ್ಗ ನಗರ ಖಾಸಗಿ ಬಸ್ ನಿಲ್ದಾಣ ಮತ್ತು ತಾಲೂಕು ಬಸ್ ನಿಲ್ದಾಣಗಳಲ್ಲಿ 10 ದಿನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ಬಸ್‌ಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಸಂಬಂಧ ಪಟ್ಟ ಖಾಸಗಿ ಬಸ್‌ಗಳ ಮಾಲೀಕರೆ ಹೊಣೆಯಾಗುತ್ತಾರೆ.
- ಚಾಲಕರು ಬಸ್‌ಗಳನ್ನು ಚಾಲನೆ ಮಾಡುವ ಸಮಯದಲ್ಲಿ, ಮೊಬೈಲ್ ಬಳಸುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಓಡಾಟ ಹಾಗೂ ಬಸ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದ್ದು, ಖಾಸಗಿ ಬಸ್‌ಗಳಿಂದ ಕಾನೂನು ಹದಗೆಡಿಸುವ ಯಾವುದೇ ಕೆಲಸಗಳು ನಡೆಯಬಾರದು ಎಂದು ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಖಾಸಗಿ ಬಸ್ ಮಾಲೀಕರಿಗೆ ಎಂಟು ಸೂಚನೆಗಳನ್ನು ನೀಡಲಾಗಿದೆ.