ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾಗೂ ಅವರ ವಿರುದ್ದ ಪಿತೂರಿ ಮಾಡಿದ ಆರೋಪ ಹೊತ್ತಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಇಬ್ಬರಿಗೂ ನ್ಯಾಯಾಲಯ ಕ್ರಮವಾಗಿ ನ.21 ಮತ್ತು ನ.28ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆ ಎಸ್.ಕೆ.ಬಸವರಾಜನ್ ಅವರನ್ನು ದಾವಣಗೆರೆ ಜೈಲಿಗೆ ಕಳುಹಿಸಿ ಎಂದು ಅವರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಲಿಲ್ಲ. ಹೀಗಾಗಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿ ಕೊಡಲಾಯಿತು.
ಈ ನಡುವೆ, ಕಾರಾಗೃಹದ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸ್ವಾಮೀಜಿ-ಬಸವರಾಜನ್ ಪೈಕಿ ಯಾರಾದರೊಬ್ಬರನ್ನೂ ಬೇರೆ ಜೈಲಿಗೆ ಕಳುಹಿಸುವಂತೆ ಜೈಲು ಅಧಿಕಾರಿಗಳು ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.
ಕೊನೆಗೆ ಬಸವರಾಜನ್ -ಸ್ವಾಮೀಜಿಯನ್ನು ಪ್ರತ್ಯೇಕ ಬ್ಲಾಕ್‌ಗಳ ಸೆಲ್‌ಗಳಿಗೆ ಕಳಿಸಲಾಗಿದೆ.
ನ್ಯಾಯಾಂಗ ಬಂಧನ ಅವಧಿ ಮುಗಿದ ಕಾರಣ ಮುರುಘಾ ಶರಣರು, ವಾರ್ಡನ್ ರಶ್ಮಿ ಹಾಗೂ ಪರಮಶಿವಯ್ಯ ಅವರನ್ನು ಕೋರ್ಟ್ ಎದುರು ಹಾಜರುಪಡಿಸಿದಾಗ ನ್ಯಾಯಾಧೀಶರು ಮೂವರಿಗೂ ನ.21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದರು. ಪಿತೂರಿ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಬಸವರಾಜೇಂದ್ರ ಅವರಿಗೆ ಕೋರ್ಟ್ ನ. 28ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು.
ಕೋರ್ಟ್‌ಗೆ ಹಾಜರುಪಡಿಸಿದ್ದ ವೇಳೆ ಶ್ರೀ ಶಿವಮೂರ್ತಿ ಮುರುಘಾ ಶರಣರು, ಮಾಧ್ಯಮಗಳು ತಮ್ಮ ತೇಜೋವಧೆ ಮಾಡುತ್ತಿವೆ ಎಂದು ನ್ಯಾಯಾಧೀಶರ ಎದುರು ಹೇಳಿಕೊಂಡರು. ಆಗ ನ್ಯಾಯಾಧೀಶರು ನಿಮ್ಮ ವಕೀಲರ ಜತೆ ಚರ್ಚಿಸಿ ಎಂದು ತಿಳಿಸಿದರು ಎಂದು ಸ್ವಾಮೀಜಿ ಪರ ವಕೀಲ ಉಮೇಶ್ ಮಾಹಿತಿ ನೀಡಿದರು.
ಜಾರ್ಜ್‌ಶೀಟ್‌ನಲ್ಲಿ 164ರ ಹೇಳಿಕೆ ಕೊಟ್ಟಿಲ್ಲ. ಅದನ್ನು ಕೊಡಿಸುವಂತೆ ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ ಎಂದು ಉಮೇಶ್ ಹೇಳಿದರು.
2ನೇ ಪ್ರಕರಣದಲ್ಲಿ ಸ್ವಾಮೀಜಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕ ಎಚ್.ಆರ್.ಜಗದೀಶ್ ಆಕ್ಷೇಪ ಸಲ್ಲಿಸಿದರು. ಸಂತ್ರಸ್ಥೆಯರ ಆಕ್ಷೇಪಕ್ಕೂ ಅವಕಾಶ ನೀಡಿದ ನ್ಯಾಯಾಲಯ, ಜಾಮೀನು ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು. ಬಸವರಾಜನ್‌ಗೆ ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ವಕೀಲರಾದ ಜಯಣ್ಣ, ನರಹರಿ ತಿಳಿಸಿದರು.