ಅಭ್ಯರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳು ಇಲ್ಲದ ಕಾರಣ ಹೊಸ ವೃತ್ತಿಪರ ಕಾಲೇಜುಗಳಿಗೆ ಮಾನ್ಯತೆ ನಿರಾಕರಿಸುವ ಹಕ್ಕನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎಂ.ಎಂ ಸುಂದ್ರೇಶ್ ಅವರನ್ನು ಒಳಗೊಂಡ ನ್ಯಾಯಪೀಠ ಉತ್ತರಾಖಂಡ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದೆ.
ಈ ಮೂಲಕ ಮನಬಂದಂತೆ ಬಿ.ಇಡಿ ಹೊಸ ಕಾಲೇಜುಗಳಿಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂಬ ಉತ್ತರಾಖಂಡ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ.
‘ರಾಜ್ಯದಲ್ಲಿ ವಾರ್ಷಿಕ 13,000 ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸುತ್ತಿದ್ದಾರೆ. ಆದರೆ ಪ್ರತಿ ವರ್ಷ 2500 ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಉಳಿದವರು ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಹೀಗಾಗಿ ಹೊಸ ಬಿ.ಇಡಿ ಕಾಲೇಜುಗಳಿಗೆ ಮಾನ್ಯತೆ ನೀಡುವುದರಿಂದ ಪ್ರಯೋಜನವಿಲ್ಲ ಎಂದು ರಾಜ್ಯ ಸರ್ಕಾರ ವಿವರಿಸಿದೆ ಎಂದು ಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರ 2013ರಲ್ಲಿ ಹೊಸ ಬಿ.ಇಡಿ ಕಾಲೇಜುಗಳಿಗೆ ಅವಕಾಶ ನೀಡುವುದನ್ನು ವಿರೋಧಿಸಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಗೆ ಮನವಿ ಮಾಡಿತ್ತು.