ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ನೌಕರರಿಗೆ ಕರೆ ನೀಡಿದರು.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳ ನಿಯೋಗವು ಇಂದು ಮುಖ್ಯ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಕೆಳಹಂತದವರೆಗೆ ಈ ಕೆಲಸ ಆಗಬೇಕು.
ಮುಂದಿನ ಕೆಲಸಗಳನ್ನು ನನಗೆ ಬಿಡಿ. ಎಲ್ಲರೂ ಒಂದಾಗಿ ಸುಭಿಕ್ಷ ನಾಡನ್ನು ಕಟ್ಟೋಣ. ಪ್ರಾಮಾಣಿಕತೆ, ನಿಷ್ಠೆ ಹಾಗು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿ. ಬಡವರಿಗೆ, ಜನಪರವಾದ ಕೆಲಸ ಮಾಡಿದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ನವ ಕರ್ನಾಟಕ ದಿಂದ ನವ ಭಾರತ ನಿರ್ಮಿಸೋಣ ಎಂದರು. ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕನಸಿಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡಬೇಕು ಎಂದರು.
ಕರ್ನಾಟಕದಲ್ಲಿ ವೇತನ ಆಯೋಗವನ್ನು ಐದು ವರ್ಷವಾದ ಕೂಡಲೇ ಘೋಷಣೆಯಾಗಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ ಎಂದರು.
ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತದೆ. ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ವಿರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಕೂಡ ಇದಕ್ಕೆ ಒತ್ತಾಸೆಯಾಗಿದ್ದರು. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರೂ ಒತ್ತಾಯ ಮಾಡಿದ್ದರು ಎಂದರು.
ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅಧಿಕಾಯಾಗಿದ್ದ ಡಾ: ಸುಧಾಕರ್ ರಾವ್ ದಕ್ಷತೆಯಿಂದ ಕೆಲಸ ಮಾಡಿದವರು. ಪ್ರಭಾವಕ್ಕೆ ಮಣಿಯದವರು.
ನ್ಯಾಯಸಮ್ಮತವಾದ 7 ನೇ ವೇತನ ಆಯೋಗದ ವರದಿ ಬರಲಿ ಎಂದು ಶುದ್ಧಹಸ್ತ, ಶುದ್ಧ ಅಂತ:ಕರಣವುಳ್ಳ ಸುಧಾಕರ್ ರಾವ್ ಅವರ ಆಯ್ಕೆ ಆಗಿದೆ ಎಂದರು. ಇದಕ್ಕೆ ನೌಕರರ ಸಹಕಾರ ಕೂಡ ಅಗತ್ಯ. ಇದನ್ನು ಸಕಾರಗೊಳಿಸಿ ಎಲ್ಲರಿಗೂ ಒಳ್ಳೆಯದು ಆಗಬೇಕು. ಚಿಂತೆ ಮಾಡಬೇಡಿ. ಮುಂದಿನ ಸರ್ಕಾರ ನಮ್ಮದೇ ಬರಲಿದೆ. ಇದರ ಅನುಷ್ಠಾನ ನಾವೇ ಮಾಡುತ್ತೇವೆ ಎಂದರು.