ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ, ಪುರ, ಸಂಗಾಪುರ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಪವಿತ್ರ ಕುಂಭಮೇಳ ಮತ್ತು ಬಾಲ ಮಹದೇಶ್ವರ ಸ್ವಾಮಿಯ ದೇವಸ್ಥಾನವನ್ನು ಸಾಧು-ಸಂತರ ಸಮ್ಮುಖದಲ್ಲಿ ಉದ್ಘಾಟಿಸುವ ಮೂಲಕ ಮಹಾ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು.
ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಕ್ಷೇತ್ರದ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಸಹಿತ ವಿವಿಧ ಕ್ಷೇತ್ರಗಳಿಂದ ಆಗಮಿಸಿದ್ದ ಸಾಧುಸಂತರ ಸಮ್ಮುಖದಲ್ಲಿ ಮಹಾ ಕುಂಭಮೇಳಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು, ಎಲ್ಲ ಜೀವರಾಶಿಗಳಿಗೂ ನೀರು ಅತಿ ಉಪಯುಕ್ತ. ಇದಕ್ಕೆ ದೇವರ ಸ್ಥಾನ ನೀಡಿ ಪೂಜೆ ಸಲ್ಲಿಸುತ್ತಾ ಬಂದಿ ದ್ದೇವೆ. ಇದರ ಒಂದು ಭಾಗವೇ ಕುಂಭ ಮೇಳ. ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವಾಗಿರುವ ತ್ರಿವೇಣಿ ಸಂಗಮದಲ್ಲಿ ನಮಗೆ ಅರಿವಿಲ್ಲದಂತೆ ಆಗಿರುವ ಪಾಪ ಕರ್ಮಗಳನ್ನು ಪರಿಹರಿಸಿಕೊಳ್ಳಲು ಸ್ನಾನ ಮಾಡುವಂತೆ ಸಲಹೆ ನೀಡಿದರು.ಸಚಿವ ಕೆ.ಸಿ. ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಕಾಗಿನೆಲೆ ಕೆ.ಆರ್. ನಗರ ಶಾಖಾ ಮಠದ ಪೀಠಾಧ್ಯಕ್ಷರಾದ ಶಿವಾನಂದಪುರಿ ಮಹಾ ಸ್ವಾಮೀಜಿ, ಚಂದ್ರವನದ ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರು ಆದಿಚುಂಚನಗಿರಿ ಮಠದ ಸೋಮನಾಥ ಸ್ವಾಮೀಜಿ, ಬೆಡದಹಳ್ಳಿ ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸಹಿತ ಅನೇಕರು ಉಪಸ್ಥಿತರಿದ್ದರು.