ಹಿಜಾಬ್ ವಿವಾದದ ಬಗ್ಗೆ ನ್ಯಾಯಾಧೀಶರು ವಿಭಜಿತ ತೀರ್ಪು ನೀಡಿರುವುದರಿಂದ ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್ನ ಹಿಜಾಬ್ ತೀರ್ಪು ಊರ್ಜಿತದಲ್ಲಿ ಇರುತ್ತದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಕರಣದ ವಿಚಾರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅನಂತರವಷ್ಟೇ ಸುಪ್ರೀಂಕೋರ್ಟ್ನ ಆದೇಶ ಪ್ರಕಟವಾಗಲಿದ್ದು, ಅದು ಹೈಕೋರ್ಟ್ ಆದೇಶದ ಜಾಗದಲ್ಲಿ ಊರ್ಜಿತಕ್ಕೆ ಬರಲಿದೆ.
ಹೀಗಾಗಿ ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್ನ ಆದೇಶ ಯಥಾಸ್ಥಿತಿ ಮುಂದುವರಿಯಲಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಕಾನೂನು ತಜ್ಞರು ಹಾಗೂ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನ, ವೈಯಕ್ತಿಕ ಕಾನೂನಿನ ಗಂಭೀರ ವಿಚಾರಣೆ ನಡೆಯುತ್ತಿದೆ. ನಮ್ಮದು ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮಗಳ ದೇಶ. ಸರ್ಕಾರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಆಚರಣೆಯ ಹಕ್ಕಿದೆ. ಆದರೆ ಈ ಹಕ್ಕು ಪರಿಪೂರ್ಣ ಹಕ್ಕಲ್ಲ, ನಿರ್ಬಂಧಗಳಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಮಾರ್ಚ್ 15 ತೀರ್ಪು ಪ್ರಕಟಿಸಿದ್ದ ಹೈಕೋರ್ಟ್, ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು.
‘ಪ್ರತಿಭಟನೆಗಳಿಂದ ಶಾಲೆ-ಕಾಲೇಜು ಮುಚ್ಚಿದ್ದು ಬೇಸರದ ಸಂಗತಿ.
ತರಗತಿಯಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೇ ಎಂಬ ಪ್ರಶ್ನೆ ಕೇಳಿಕೊಂಡಿದ್ದ ಹೈಕೋರ್ಟ್, ಈ ಬಗ್ಗೆ ಆಳವಾದ ವಿಚಾರಣೆ ನಡೆಸುವ ಅಗತ್ಯವಿದೆ. ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಪ್ರತಿಭಟನೆಗಳಿಂದ ಶಾಲೆ-ಕಾಲೇಜುಗಳು ಬಂದ್ ಆಗಬಾರದು ಎಂದು ಹೇಳಿತ್ತು.