ಲೋಪಗಳಿಂದ ಕೂಡಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಪರಿಷ್ಕರಿಸಿ, ಬಲಪಡಿಸಬೇಕು. ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿರುವವರನ್ನು ದಂಡಿಸುವ ಅಕಾಶ ಇರಬೇಕು. ಈ ಮಸೂದೆಯ ಜಾರಿ ಪ್ರಾಧಿಕಾರಗಳಾಗಿ ರಚಿಸಲಾದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸ್ವಯಸ್ತ ಸಂಸ್ಥೆಗೆ ಸ್ಥಾನ ನೀಡಬೇಕು.
ಇವು ಸ್ವಾಮೀಜಿಗಳು, ಕಾನೂನು ತಜ್ಞರು, ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಪರ ಸಂಘ-ಸಂಸ್ಥೆಗಳ ಮುಖ್ಯಸ್ಥರ ಆಗ್ರಹ. ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಬುಧವಾರ ಆಯೋಜಿಸಿದ ಚಿಂತನ ಗೋಷ್ಠಿಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022’ರ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ದೊಡ್ಡರಂಗೇಗೌಡ, ಪ್ರಧಾನ ಗುರುದತ್ತ, ಶಾಸಕ ಎಚ್.ಕೆ. ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ವಕೀಲ ಅಶೋಕ ಹಾರನಳ್ಳಿ, ಕನ್ನಡ ಪರ ಹೋರಾಟಗಾರ ಸಾ.ರಾ. ಗೋವಿಂದು, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿ ಹಲವರು ಮಸೂದೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
‘ಮಸೂದೆ ಬಗ್ಗೆ ಕುರಿತು ವ್ಯಾಪಕ ಚರ್ಚೆ ನಡೆಯಬೇಕು. ಸದನ ಸಮಿತಿ ರೂಪುಗೊಂಡು ಚರ್ಚೆಯ ಅಂಶಗಳನ್ನು ಪರಿಶೀಲಿಸಿ, ಅಳವಡಿಸಿಕೊಳ್ಳಬೇಕು. ಯಾವುದೇ ಸರ್ಕಾರ ತನ್ನ ಅವಧಿಯ ಕೊನೆಯ ಭಾಗದಲ್ಲಿ ಕಾನೂನು ರೂಪಿಸುವ ಬದಲು, ಆರಂಭಿಕ ಹಂತದಲ್ಲೇ ಮಸೂದೆ ಮಂಡಿಸಿ, ಕಾಯ್ದೆಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಎಚ್.ಕೆ. ಪಾಟೀಲ ಹೇಳಿದರು.
‘ಸರ್ಕಾರ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಜಾರಿಗೊಳಿಸುವ ಅಧಿಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಇರಬೇಕು. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿದವರು ಪರಿಷತ್ತಿನ ಅಧ್ಯಕ್ಷರನ್ನು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಆದ್ದರಿಂದ ಪರಿಷತ್ತಿನ ಅಧ್ಯಕ್ಷರಿಗೆ ವಿಶೇಷ ಅಧಿಕಾರವನ್ನು ಸರ್ಕಾರ ನೀಡಬೇಕು’ ಎಂದು ಎಸ್.ಎಲ್. ಭೈರಪ್ಪ ಆಗ್ರಹಿಸಿದರು.
ನ್ಯಾ. ಅರಳಿ ನಾಗರಾಜ್, ಕನ್ನಡದ ಜಾರಿಗೆ ಪ್ರಾಮುಖ್ಯತೆ ಎಂಬ ಪದ ಮಸೂದೆಯಲ್ಲಿದ್ದು, ಅದು ಕಡ್ಡಾಯ ಎಂದಾಗಬೇಕು. ನ್ಯಾಯಾಲಯದಲ್ಲಿ ಕನ್ನಡ ಬಳಕೆಯ ಪ್ರಸ್ತಾಪ ಜಿಲ್ಲಾ ನ್ಯಾಯಾಲಯಗಳಿಗೆ ಸೀಮಿತವಾಗಿದೆ. ಇದನ್ನು ಹೈಕೋರ್ಟ್‌ಗೂ ವಿಸ್ತರಿಸಬೇಕು ಎಂದು ಹೇಳಿದರು.
ಈ ಮಸೂದೆ ಅಸ್ತಿತ್ವದಲ್ಲಿರುವ ಅನೇಕ ಕಾನೂನುಗಳೊಂದಿಗೆ ಸಂಘರ್ಷ ಹೊಂದಿದೆ. ಜಾರಿಗೊಳಿಸುವಾಗ ಕೆಲ ತೊಡಕುಗಳು ಎದುರಾಗುತ್ತವೆ. ಇದರಲ್ಲಿನ ಕನ್ನಡಿಗ ಎನ್ನುವ ವ್ಯಾಖ್ಯಾನ ಶಾಸನಬದ್ಧವಾಗಿಲ್ಲ. ರಾಜಭಾಷಾ ಆಯೋಗ ಎನ್ನುವ ಸೂಚನೆ ಇದ್ದರೂ ಅದು ಕೇವಲ ಭಾಷಾಂತರಕ್ಕೆ ಸೀಮಿತವಾಗಿ ಅಸ್ಪಷ್ಟವಾಗಿದೆ ಎಂದು ಅಶೋಕ ಹಾರನಹಳ್ಳಿ ಅವರು ತಿಳಿಸಿದರು.