ಐದು ಕಂಪೆನಿಗಳ 1.53 ಲಕ್ಷ ಕೋಟಿ ರು. ಮೊತ್ತದ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆ ಪ್ರಸ್ತಾವನೆಗಳಿಗೆ ಎರಡು ತಿಂಗಳೊಳಗೆ ಕೇಂದ್ರ ಸರ್ಕಾರವು ಸಮ್ಮತಿ ಸೂಚಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿ ಕಂಡಕ್ಟರ್ ಅಸೋಸಿಯೇಷನ್(ಐಇಎಸ್‌ಎ) ಹಮ್ಮಿಕೊಳ್ಳಲಾಗಿದ್ದ ‘ವಿಷನ್ ಸಮ್ಮಿಟ್’ನಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ವೇದಾಂತ, ಫೆಕ್ಸ್‌ಕಾನ್ ಜೆವಿ, ಐಜಿಎಸ್‌ಎಸ್, ವೆಂಚರ್ಸ್, ಐಎಸ್‌ಎಂಸಿ ಕಂಪೆನಿಗಳು ಎಲೆಕ್ಟ್ರಾನಿಕ್ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದು 1.53 ಲಕ್ಷ ಕೋಟಿ ರು. ಹೂಡಿಕೆ ಮಾಡಲಿವೆ.
ಕಂಪೆನಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿ ಒಪ್ಪಿಗೆ ಸೂಚಿಸಲಿದ್ದು ಹೂಡಿಕೆ ಪ್ರಾರಂಭಿಸಲಿವೆ. ಗುಜರಾತ್ ಮತ್ತು ಕರ್ನಾಟಕ ಸರ್ಕಾರಗಳು ಅಭಿವೃದ್ಧಿ ದೃಷ್ಟಿಯಿಂದ ಬಂಡವಾಳ ಆಕರ್ಷಣೆಗೆ ಒತ್ತು ನೀಡಿವೆ. ಇದರಿಂದಾಗಿ ಉದ್ಯೋಗ ಸೃಷ್ಟಿ, ಹೂಡಿಕೆ, ಸಂಶೋಧನೆ, ರಾಜ್ಯಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು.
ಕೇಂದ್ರ ಸರ್ಕಾರವು 5 ಕಂಪೆನಿಗಳ 1.53 ಲಕ್ಷ ಕೋಟಿ ರು. ಮೊತ್ತದ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯ ಪ್ರಸ್ತಾವನೆಗಳಿಗೆ 30 ರಿಂದ 60 ದಿನದೊಳಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ ಚಿಪ್ ಮತ್ತು ಡಿಸ್‌ಪ್ಲೇ ತಯಾರಿಕಾ ಘಟಕಗಳ ಸ್ಥಾಪನೆಯಾಗಲಿವೆ.
ಕಳೆದ ಎಂಟರಿಂದ ಒಂಬತ್ತು ತಿಂಗಳಲ್ಲಿ ದೇಶದ ಸೆಮಿ ಕಂಡಕ್ಟರ್ ಉತ್ಪಾದನಾ ವಲಯದಲ್ಲಿ ಭಾರೀ ಪ್ರಗತಿ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟರು.