ಕಳೆದ ಎರಡು ವರ್ಷದ ಹಿಂದೆ ಪ್ರಾರಂಭವಾಗಿದ್ದ ಕೊರೋನಾ ಇಡೀ ಜಗತ್ತನ್ನೇ ಬದಲಾಯಿಸಿಬಿಟ್ಟಿದೆ. ಈ ಸಮಯದಲ್ಲಿ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಆಯ್ಕೆ ನೀಡಿವೆ.
ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುವುದು ಉದ್ಯೋಗಿಗಳಿಗೆ ವರವಾಗಿದೆ ಕೂಡ. ಅದರಲ್ಲೂ ಮಿತಿ ಮೀರಿದ ಟ್ರಾಫಿಕ್ ಪರದಾಟದಿಂದ ಮುಕ್ತಿ ಸಿಕ್ಕಿದೆ.
ಆದರೆ ಈಗ ಕೊರೋನಾ ಅವತಾರ ಮುಗಿದಿದೆ. ಈ ಎರಡು ವರ್ಷಗಳಿಂದ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಿದ್ದ ಕಂಪನಿಗಳೆಲ್ಲ ಕಚೇರಿಗೇ ಬಂದು ಕೆಲಸ ಮಾಡಿ ಎನ್ನುತ್ತಿವೆ. ಕಂಪನಿಗಳೇನೋ ಕೆಲಸಕ್ಕೆ ಆಫೀಸ್ ಗೇ ಕರೆಯುತ್ತಿವೆ. ಆದರೆ ಉದ್ಯೋಗಿಗಳು ಮಾತ್ರ ನಾವ್ ರೆಡಿ ಇಲ್ಲ ಎನ್ನುತ್ತಿದ್ದಾರೆ.
ಮಾನವ ಸಂಪನ್ಮೂಲ ತಜ್ಞರು ಉದ್ಯೋಗಿಗಳನ್ನು ಮತ್ತೆ ಆಫೀಸ್ ಗೆ ಕರೆಯುವುದು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದಿದ್ದಾರೆ.
ಈ ಕ್ರಮವು ಉದ್ಯೋಗಿಗಳು ಕಂಪನಿಯನ್ನು ತೊರೆಯಲು ಕಾರಣವಾಗಬಹುದು ಎಂದು ಹೆಚ್ ಆರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಮಿಲೇನಿಯಲ್ ಮತ್ತು ಜೆನ್ಜ್ ಪ್ರತಿಭೆಗಳು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಚೇರಿಯಿಂದ ಕೆಲಸ ಮಾಡುವ ಆದೇಶದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಐಟಿ ದೈತ್ಯ ಟಿಸಿಎಸ್ ತನ್ನ ಶೇಕಡಾ 85 ರಷ್ಟು ಉದ್ಯೋಗಿಗಳಿಗೆ ವಾರಕ್ಕೆ ಕನಿಷ್ಠ ಮೂರು ಬಾರಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಿದೆ. ಇನ್ಫೋಸಿಸ್ ಮೇ ತಿಂಗಳಿಗೆ ಸುಮಾರು ₹ 2.3 ಕೋಟಿಗೆ 5 ಲಕ್ಷ ಚದರ ಅಡಿ ಕಚೇರಿ ಜಾಗವನ್ನು ಬಾಡಿಗೆಗೆ ನೀಡುವ ಮೂಲಕ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆತರುವ ಇದೇ ರೀತಿಯ ಸೂಚನೆ ನೀಡಿದೆ.
ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆಸಿಕೊಳ್ಳುವ ಐಟಿ ಕಂಪನಿಗಳ ಕ್ರಮವು ವಲಯದಲ್ಲಿ ಹೆಚ್ಚುತ್ತಿರುವ ಮೂನ್‌ಲೈಟಿಂಗ್ ಸಮಸ್ಯೆಗೆ ಕಾರಣವಾಗಬಹುದು. ಉದ್ಯೋಗಿಗಳು ಇದ್ದಿರುವ ಕೆಲಸವನ್ನು ಬಿಡಬಹುದು ಹಾಗೂ ಬೇರೆ ಕೆಲಸವನ್ನು ನೋಡಿಕೊಳ್ಳಬಹುದು ಎಂದು CIEL ಹೆಚ್ ಆರ್ ಸೇವೆಗಳ ಸಿಇಒ ಆದಿತ್ಯ ಮಿಶ್ರಾ ಹೇಳಿದ್ದಾರೆ.
ಆದಾಗ್ಯೂ, ಕಂಪನಿಗಳು ವರ್ಕ್ ಫ್ರಮ್ ಆಫೀಸ್ ನೀತಿಯನ್ನು ಪಾಲಿಸುವಂತೆ ಉದ್ಯೋಗಿಗಳನ್ನು ಒತ್ತಾಯಿಸಿದರೆ ಅಂಥ ಕಂಪನಿಗಳು ಉದ್ಯೋಗಿಗಳನ್ನು ಕಳೆದುಕೊಳ್ಳುವ ಅಪಾಯ ಎದುರಿಸಬಹುದು. “ಕಚೇರಿ ಮಾದರಿಯಿಂದ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುವ ಯಾವುದೇ ಕಂಪನಿಯು ಉದ್ಯೋಗಿಗಳನ್ನು ಕಳೆದುಕೊಳ್ಳುತ್ತದೆ. ನಾವು ಸಂವಹನ ನಡೆಸುವ ಶೇಕಡ 60 ರಷ್ಟು ಪ್ರತಿಭೆಗಳು ರಿಮೋಟ್ ವರ್ಕಿಂಗ್ ಮಾಡೆಲ್‌ಗಾಗಿ ಹಾತೊರೆಯುತ್ತಾರೆ “ಎಂದು Xpheno ನ ಸಹ-ಸಂಸ್ಥಾಪಕ ಕಮಲ್ ಕಾರಂತ್ ಹೇಳಿದ್ದಾರೆ.