Monday, December 15, 2025
Monday, December 15, 2025

ನಾವೀನ್ಯತೆಯ ಯಕ್ಷರಂಗ ಪ್ರಯೋಗ

Date:

ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯ ಯಕ್ಷಗಾನದಲ್ಲಿ ಇರುವುದನ್ನು ನಾವು ಕಾಣುತ್ತೇವೆ. ನಾಟಕದಲ್ಲೂ ಇದನ್ನೇ ಅನುಸರಿಸಿ ಯಕ್ಷಗಾನದ ಸ್ವರೂಪ ನೀಡಿ ರಸಾನುಭವ ನೀಡಿದ್ದು ಯಕ್ಷರಂಗ ಪ್ರಯೋಗವಾದ ಶೈಲೇಶ್ ತೀರ್ಥಹಳ್ಳಿ ನಿರ್ದೇಶನದ ಚಿತ್ರಪಟ ರಾಮಾಯಣ. ಇದರ ರಚನೆ ಯಕ್ಷರಂಗದ ಭೀಷ್ಮರೆಂದೇ ಖ್ಯಾತನಾಮರಾದ ಶ್ರೀ ಹೊಸ್ತೋಟ ಮಂಜುನಾಥ ಭಾಗವತರದ್ದು. ಹಿಂದೊಮ್ಮೆ ಸ್ವತಃ ಹೊಸ್ತೋಟ ಭಾಗವತರೇ ರಂಗಾಯಣದ ಕಲಾವಿದರಿಗೆ ಇದರ ಮಾತುಗಾರಿಕೆ ಕಡಿಮೆ ಮಾಡಿ ಅಭಿನಯದಲ್ಲೇ ಕಥೆ ಹೇಳುವಂತೆ ನಿರ್ದೇಶಿಸಿ ತರಭೇತಿ ನೀಡಿದ್ದರಂತೆ ಆದರದು ರಂಗದ ಮೇಲೆ ತೆರೆ ಕಂಡಿತ್ತೋ ಇಲ್ಲವೋ ತಿಳಿದಿಲ್ಲ.

ಶಿವಮೊಗ್ಗ ರಂಗಾಯಣದವರು ಸದಾ ನೂತನ ಪ್ರಯೋಗಗಳಿಗೆ ತಮ್ಮನ್ನು ತಾವು ತೆರೆದುಕೊಂಡವರು. ಈಗ ಈ ಪ್ರಯೋಗಕ್ಕೆ ಹೊಸ ಭಾಷ್ಯ ಬರೆದು ಯಶಸ್ವಿಯಾದರೆಂದರೆ ತಪ್ಪಾಗಲಾರದು. ಇದೊಂದು ರೀತಿಯ ಹೊಸ ಪ್ರಯೋಗ. ಯಕ್ಷಗಾನವೆಂದರೆ ಬರೀ ಅಭಿನಯ ಕಲೆ ಗೊತ್ತಿದ್ದರೆ ಮಾತ್ರ ಸಾಕಾಗುವುದಿಲ್ಲ ಭಾಗವತಿಕೆ, ಚಂಡೆ ಮದ್ದಳೆಯ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಮರು ಕ್ಷಣವೇ ನಿಂತು ಮಾತನಾಡುವ ಚಾಪಿರಬೇಕು. ಭಾವ ಭಂಗಿ, ಹೆಜ್ಜೆ, ಸಮಯ ಪ್ರಜ್ಞೆ ಇತ್ಯಾದಿಗಳೆಲ್ಲದರ ಜೊತೆಗೆ ಭಾರವಾದ ವೇಷ ಕಟ್ಟಿಕೊಂಡಿರಬೇಕು. ಇವೆಲ್ಲ ಒಳಗೊಂಡಾಗ ಪರಿಪೂರ್ಣ ಎನಿಸುವ ಈ ಕಲೆ ಅಭಿನಯ ಚೆನ್ನಾಗಿ ಗೊತ್ತಿದ್ದ ರಂಗಾಯಣದ ರೆಪರ್ಟರಿ ಕಲಾವಿದರು ತಿಂಗಳೊಳಗಾಗಿ ಯಕ್ಷಗಾನದ ಸರ್ವವನ್ನೂ ಅರಿಯುವ ಪ್ರಯತ್ನದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಪ್ರಸಂಗದ ಕಥೆ ಮೂಲ ರಾಮಾಯಣದ್ದೇ ಆದರೂ ಸಹ ಕಥಾ ಸಂವಿಧಾನದಲ್ಲಿ ಬದಲಾವಣೆ ಇದೆ.
ಸೀತಾದೇವಿಯ ವನವಾಸದ ಕಾರಣವನ್ನು ಕಾಲ್ಪನಿಕವಾಗಿ ಹೆಣೆದ ಕಥೆ.
ರಂಗಪ್ರಯೋಗದಲ್ಲಿ ಯಕ್ಷಗಾನದ ಚೌಕಟ್ಟಿಗೆ ಭಂಗ ತರದಂತೆ ಸುಂದರವಾದ ಚಿತ್ರಣವನ್ನು ಕಣ್ಣೆದುರಿಗೆ ತಂದು ನಿಲ್ಲಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನವೂ ಸಹ ಪೌರಾಣಿಕ ಪ್ರಸಂಗಗಳನ್ನು ಬಿಟ್ಟು ಸಿನೆಮಾ ಹಾಡನ್ನೊ, ಕಥೆಯನ್ನೊ ಅರಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಮೂಲ ಯಕ್ಷಗಾನದ ಸೌಂದರ್ಯ ಉಳಿಸಿ ನಾಟಕದ ರಂಗನ್ನು ತುಂಬಿ ವಿನೂತನವಾದ ರಚನೆಯಲ್ಲಿ ನೋಡುಗರಿಗೆ ರಸಾನುಭವ ನೀಡಿದ್ದಾರೆ. ಶೂರ್ಪನಖಿ ಸೀತೆಗೆ ತನ್ನ ಕುತಂತ್ರದ ಬಗ್ಗೆ ತಿಳಿಸುವ ದೃಶ್ಯ, ಹನುಮಂತನ ಆಕಾಶ ಪ್ರಯಾಣ, ಕಿರಾತಪಡೆಯ ಬೇಟೆಯ ಸೊಬಗು ಇವುಗಳು ನಿರ್ದೇಶಕನ ನಾವೀನ್ಯತೆಗೆ ಹಿಡಿದ ಕನ್ನಡಿ.
ಇನ್ನು ಅಭಿನಯದ ವಿಷಯಕ್ಕೆ ಬಂದರೆ ಶ್ರೀರಾಮನಿಂದ ಮೊದಲುಗೊಂಡು ಕೊನೆಯಲ್ಲಿ ಬರುವ ವಾಲ್ಮೀಕಿಯವರೆಗೆ ಎಲ್ಲರೂ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಬ್ಬೊಬ್ಬರನ್ನು ನೋಡಿದರೆ ವೃತ್ತಿಪರ ಕಲಾವಿದರೇನೊ ಎನ್ನುವ ರೀತಿಯಲ್ಲಿ ಅಭಿನಯಿಸಿದ್ದಾರೆ. ಕಡಿಮೆ ಅವಧಿಯಲ್ಲೇ ಅಭ್ಯಸಿಸಿ ನೀಡಿದ ಪ್ರದರ್ಶನ ಗೆದ್ದಿರುವುದು ಅವರ ಕಲಿಕೆಯ ಶ್ರದ್ಧೆಯನ್ನು ಬಿಂಬಿಸುವಂತಿದೆ. ಶ್ರೀ ರಾಮನ ರಾಜ ಗಾಂಭೀರ್ಯ, ಲಕ್ಷ್ಮಣ, ಭರತನ ವಿನಯತೆ, ಕಿರಾತಪಡೆಯ ಗಮ್ಮತ್ತು, ಶೂರ್ಪನಖಿಯ ಅಭಿನಯ, ರೂಪಾಂತರಗೊಂಡಾಗಿನ ವಯ್ಯಾರ, ಯೋಗಿನಿಸೆ ಹಾಸ್ಯ ಮಿಶ್ರಿತ ಮಾತುಗಾರಿಕೆಯ ನಟನೆ, ಸೀತಾದೇವಿಯ ಸೊಬಗು, ಅವಳ ಸೇವಕಿಯ ಅಭಿನಯ, ಹನುಮನ ನೈಜತೆ, ರಾವಣನ ಮುಗ್ಧತೆ, ವಾಲ್ಮೀಕಿಯ ನಟನೆ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇದಕ್ಕೆ ಪೂರಕವಾದ ರವೀಂದ್ರ ಭಟ್ ಹಾಗೂ ರಾಹುಲ್ ಸುವರ್ಣರವರ ಭಾಗವತಿಕೆ, ಶರತ್ ರವರ ಮದ್ದಳೆ, ರೋಹಿತ್ ತೀರ್ಥಹಳ್ಳಿ ಇವರ ಚಂಡೆ ಇವೆಲ್ಲವೂ ಒಳಗೊಂಡಂತೆ ಅತ್ಯುತ್ತಮವಾದ ರಂಗಸಜ್ಜಿಕೆ, ಪ್ರಸಾದನ ಯಕ್ಷರಂಗ ಪ್ರಯೋಗದ ರಂಗೇರುವಂತೆ ಮಾಡಿತು.
ಆರಂಭದಲ್ಲಿ ಬಾಲಗೋಪಾಲವೇಷ, ಪೀಠಿಕಾ ಸ್ತ್ರೀ ವೇಷವನ್ನೂ ಬಿಡದೇ ಈ ಪ್ರಯೋಗ ಮಾಡಿದ್ದು ನಾಟಕಾಭಿನಯ ಕಲಿತವರಿಗೆ ಯಕ್ಷಗಾನದ ಸಮಗ್ರ ಪರಿಚಯ ಮಾಡಿಸಿದಂತಿತ್ತು. ಇವೆಲ್ಲಕ್ಕೂ ಕಲಶಪ್ರಾಯದಂತೆ ಗಮನ ಸೆಳೆದ ಅಂಶ ಏನೆಂದರೆ ಆರಂಭದಲ್ಲಿ ವೇದಿಕೆಯ ಮುಂಭಾಗದಲ್ಲಿ ತಂದಿಟ್ಟಂತಹ ದೀಪ ಮಂಗಳ ಹಾಡಿ ಕಲಾವಿದರ ಪರಿಚಯಿಸುವವರೆಗೂ ಆರದೇ ಉರಿಯುತ್ತಿದ್ದುದು ಪ್ರಯೋಗ ಗೆದ್ದಿದ್ದಕ್ಕೆ ಸಾಕ್ಷಿಯಾದಂತಿತ್ತು. ತನ್ನದೇ ಆದ ಚೌಕಟ್ಟು ಹೊಂದಿದ ಕಲೆಯ ನಿಯಮವನ್ನು ಇಲ್ಲಿ ಮಿರದಿರುವುದೇ ವಿಶೇಷ. ಶೂರ್ಪನಖಿಯ ಉಗುರು, ರಾವಣನ ದಶ ಶಿರ, ತುಂಬುಗರ್ಭಿಣಿ ಸೀತೆ ಇವುಗಳು ಅಭಿನಯದಲ್ಲಿ ಇರಬೇಕೆ ಹೊರತು ವೇಷದಿಂದಲ್ಲ ಎನ್ನುವುದು ನಿರ್ದೇಶಕರ ಯಕ್ಷಗಾನ ನಿಷ್ಠೆ ತೋರಿಸುತ್ತದೆ. ಈ ನವ್ಯ ಪ್ರಯೋಗಕ್ಕೆ ನಾಂದಿ ಹಾಡಿದ ಶಿವಮೊಗ್ಗ ರಂಗಾಯಣ ಹಾಗೂ ಅದರ ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳಿಗೆ ಅನಂತಾನಂತ ದ ಧನ್ಯವಾದ ಸಲ್ಲಲೇ ಬೇಕು

-ಡಾ. ಮೈತ್ರೇಯಿ ಆದಿತ್ಯ
ಉಪನ್ಯಾಸಕರು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...