ಉಕ್ರೇನ್ ಮೇಲೆ ಆಕ್ರಮಣ ಮುಂದುವರಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮಾಷೆ ಮಾಡುತ್ತಿಲ್ಲ ಎಂದು ಎಚ್ಚರಿಸಿದ್ದಾರೆ.
ಉದ್ಯಮಿ ಜೇಮ್ಸ್ ಮುರ್ಡೊಕ್ ಅವರ ಮ್ಯಾನ್ ಹಟನ್ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಬೈಡನ್, ಪರಮಾಣು ಬೆದರಿಕೆಗಳನ್ನು ಬಲವಾಗಿ ಖಂಡಿಸಿದ್ದಾರೆ.
ಸೋವಿಯತ್ ಒಕ್ಕೂಟವು ಕ್ಯೂಬಾದಲ್ಲಿ ಕ್ಷಿಪಣಿಗಳನ್ನು ಸ್ಥಾಪಿಸಿದ್ದ ಕಾರಣ ಪರಮಾಣು ಬಿಕ್ಕಟ್ಟು ಉಂಟಾಗಿತ್ತು. ಇದನ್ನು ಉಲ್ಲೇಖಿಸಿ ಟೀಕಾ ಪ್ರಹಾರ ಮಾಡಿದ ಬೈಡನ್, ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಪರಮಾಣು ಶಸ್ತ್ರಾಸ್ತ್ರಗಳ ನೇರ ಅಪಾಯ ಎದುರಾಗಿದೆ ಎಂದಿದ್ದಾರೆ.
ಉಕ್ರೇನ್ ಭೂ ಪ್ರದೇಶವನ್ನು ವಶಕ್ಕೆ ಪಡೆಯುವ ತನ್ನ ಪ್ರಯತ್ನಕ್ಕೆ ತಡೆಯುಂಟಾದರೆ ಹಾಗೂ ರಷ್ಯಾದ ‘ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಎದುರಾದರೆ ಉಕ್ರೇನ್‌ನಲ್ಲಿ ಪರಮಾಣು ಅಸ್ತ್ರವನ್ನು ಬಳಸುವುದಾಗಿ ಪುಟಿನ್ ಗುಡುಗಿದ್ದರು. ಒಂದೊಮ್ಮೆ ಪುಟಿನ್, ಪರಮಾಣು ಅಸ್ತ್ರ ಬಳಸಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚರ್ಚೆ ನಡೆಯುತ್ತಿದೆ.
ಈ ಬೆದರಿಕೆಯು ರಷ್ಯಾದ ಯುದ್ಧತಂತ್ರವಾಗಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಸೀಮಿತ ಪ್ರದೇಶದಲ್ಲಿನ ಯುದ್ಧತಂತ್ರದ ಹೊಡೆತವು ವ್ಯಾಪಕವಾದ ಪರಿಣಾಮಗಳನ್ನು ಪ್ರಚೋದಿಸುವ ಅಪಾಯವಿದೆ ಎಂದು ಬೈಡನ್ ಎಚ್ಚರಿಸಿದ್ದಾರೆ.
ನಮಗೆ ಆ ವ್ಯಕ್ತಿಯ ಬಗ್ಗೆ ಚೆನ್ನಾಗಿ ತಿಳಿದಿದೆ. ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಜೈವಿಕ ಇಲ್ಲವೇ ರಾಸಾಯನಿಕ ಅಸ್ತ್ರಗಳ ಸಂಭಾವ್ಯ ಬಳಕೆಯ ಬಗ್ಗೆ ಅವರು ಹೇಳುತ್ತಿರುವುದು ತಮಾಷೆಯಲ್ಲ. ಏಕೆಂದರೆ, ಅವರ ಸೇನೆ ಗಮನಾರ್ಹವಾಗಿ ದುರ್ಬಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.