ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ರೈತರ ಜಮೀನುಗಳ ಸರ್ವೆ ನಂಬರ್‌ಗೆ ಆಧಾರ್ ಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದುವರೆಗೆ 78 ಲಕ್ಷ ರೈತರನ್ನು ಈ ವ್ಯಾಪಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನೈಸರ್ಗಿಕ ಮತ್ತು ಡಿಜಿಟಲ್ ಕೃಷಿ ಕುರಿತ ವರ್ಚುವಲ್ ವಿಡಿಯೋ ಸಂವಾದದಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಭೂಮಿ ತಂತ್ರಜ್ಞಾನದಡಿ ಈ ಹಿಂದೆಯೇ ಡಿಜಿಟಲೀಕರಣವಾಗಿದೆ. 62 ಲಕ್ಷ ಭೂಮಿಯುಳ್ಳ ಹಾಗೂ 16 ಲಕ್ಷ ಭೂ ರಹಿತರನ್ನೂ ತಂತ್ರಾಂಶದಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ ಜಾರಿಗೆ ತಂದ ಫಟ್ಸ್ ಯೋಜನೆಯನ್ನು ಎಲ್ಲ ರಾಜ್ಯಗಳೂ ಅಳವಡಿಸಿಕೊಳ್ಳುತ್ತಿವೆ. ಈ ತಂತ್ರಾಂಶವನ್ನು ನಿರಂತರವಾಗಿ ಸುಧಾರಣೆ ಮಾಡಲಾಗುತ್ತಿದೆ. ಜತೆಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ತಮ್ಮ ಭೂಮಿ ಹಾಗೂ ಬೆಳೆ ಸಮೀಕ್ಷೆಯನ್ನೂ ರೈತರೇ ಮಾಡುತ್ತಿದ್ದಾರೆ. ಈವರೆಗೆ 212 ಕೋಟಿ ಭೂ ಪ್ರದೇಶವನ್ನು ಡಿಜಿಟಲೀಕರಣಗೊಳಿಸಲಾಗಿದೆ. 2.12 ಕೋಟಿ ಪೈಕಿ 16,584 ಭೂ ಪ್ರದೇಶವನ್ನು ರೈತರೇ ಸಮೀಕ್ಷೆ ಮಾಡಿದ್ದಾರೆ. 1.61 ಕೋಟಿ ಪ್ರದೇಶವನ್ನು ಇಲಾಖೆ ಮಾಡಿದೆ. ಯಾವುದೇ ವ್ಯಾಜ್ಯಕ್ಕೆ ಎಡೆ ಮಾಡಿಕೊಡದಿರಲು ಶೇ.100ರಷ್ಟು ರೈತರೇ ಸಮೀಕ್ಷೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.