ಬಾಲಿವುಡ್ ನಟಿ ಆಶಾ ಪರೇಖ್ ಅವರಿಗೆ ಈ ವರ್ಷ 68ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಿನ್ನೆ ರಾತ್ರಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಶಾ ಪರೇಖ್ ಈ ಕುರಿತು ಮಾತನಾಡಿದ್ದು, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.
ನನ್ನ ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಈ ಪ್ರಶಸ್ತಿ ಲಭಿಸಿದೆ. 80 ವರ್ಷಗಳಲ್ಲಿ ಇದು ಅತ್ಯುತ್ತಮ ಕೊಡುಗೆಯಾಗಿದೆ. ಈ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನನ್ನ ಆಸೆಗಳೆಲ್ಲ ಈಡೇರಿದಂತಿದೆ. ಆರಂಭದಲ್ಲಿ ನನಗೆ ಈ ಪ್ರಶಸ್ತಿ ಬರುತ್ತಿದೆ ಎಂದು ತಿಳಿದಾಗ ನನಗೆ ನಂಬಲಾಗಲಿಲ್ಲ. ಆದರೆ ಈಗ ನಿಜಕ್ಕೂ ನನಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಆಶಾ ಪರೇಖ್ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ತಮ್ಮ 10 ನೇ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ತಮ್ಮ ನಟನಾ ವೃತ್ತಿ ಬದುಕಿನಲ್ಲಿ ಸುಮಾರು 95 ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೊನೆಯದಾಗಿ 1999 ರ ‘ಸರ್ ಆಂಖೋನ್ ಪರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಆಶಾ ಅವರಿಗೆ 11 ಬಾರಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
1992 ರಲ್ಲಿ, ಅವರಿಗೆ ಭಾರತ ಸರ್ಕಾರದಿಂದ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು.
ಆಶಾ ಪ್ರಸ್ತುತ ‘ಕರ ಭವನ’ ಎಂಬ ನೃತ್ಯ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇದಲ್ಲದೆ, ಮುಂಬೈನ ಸಾಂತಾಕ್ರೂಜ್‌ನಲ್ಲಿ ಅವರ ಆಸ್ಪತ್ರೆ ‘ಬಿಸಿಜೆ ಆಸ್ಪತ್ರೆ ಮತ್ತು ಆಶಾ ಪರೇಖ್ ಸಂಶೋಧನಾ ಕೇಂದ್ರ’ ಸಹ ನಡೆಯುತ್ತಿದೆ.