ರೇಬಿಸ್ ರೋಗವು ವೈರಾಣುವಿನಿಂದ ಹರಡುವ ಸೊಂಕು ರೋಗವಾಗಿದೆ. ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಮಾರಣಾಂತಿಕ ಪ್ರಾಣಿಜನ್ಯ ರೋಗವಾಗಿದೆ. ಗ್ರಾಮೀಣ ಬಾಗದಲ್ಲಿ ನಾಯಿಗಳಿಂದ ರೋಗ ಹರಡುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಎನ್.ಎಮ್ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ರೇಬಿಸ್ ಕುರಿತ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಮಾತನಾಡಿದರು. ರೇಬಿಸ್ ರೋಗವು ರೇಬಿಸ್ ಸೋಂಕಿತ ಪ್ರಾಣಿಗಳ ಕಡಿತದಿಂದ ಉಂಟಾಗುತ್ತದೆ. ಪ್ರಾಣಿಗಳ ಲಾಲಾರಸದ ಮೂಲಕ ವೈರಸ್ ಹರಡುತ್ತದೆ. ನಾಯಿಕಡಿತಕ್ಕೆ ಒಳಪಟ್ಟ ಭಾಗವನ್ನು ತಕ್ಷಣವೇ ಸಾಬೂನು ಅಥವಾ ಶುದ್ಧ ನೀರಿನಿಂದ ತೊಳೆಯುವ ಮೂಲಕ ಪ್ರಾಥಮಿಕವಾಗಿ ಸುರಕ್ಷತಾ ಕ್ರಮವನ್ನು ಪಾಲಿಸಬೇಕು. ನಂತರ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಆರೋಗ್ಯ ಚಿಕಿತ್ಸೆಯನ್ನು ಪಡೆಯಬೇಕು. ಸಾಕುಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ವಿರುದ್ಧ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಪ್ರಾಣಿ ಪ್ರಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 2016 ರಿಂದ 2022 ರವರೆಗೆ ರೇಬಿಸ್ ರೋಗದಿಂದಾಗಿ 8 ಸಾವಿನ ಪ್ರಕರಣಗಳು ಸಂಭವಿಸಿವೆ. 2015 ರಿಂದ 2019 ರವರೆಗೆ ಜಿಲ್ಲೆಯಲ್ಲಿ ನಾಯಿಕಡಿತದ ಪ್ರಕರಣಗಳು ಏರುಗತಿಯಲ್ಲಿದೆ. 2019ರ ನಂತರ ಕ್ರಮೇಣ ಇಳಿಮುಖವಾಗಿವೆ. 2019 ನೇ ಸಾಲಿನಲ್ಲಿ ಕೊರೋನಾ ಸಂದರ್ಭದಲ್ಲಿ 10,437 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಎ.ವಿ.ಆರ್ 3,696 ಮತ್ತು ಇಮ್ಯುನೊಗ್ಲಾಬ್ಯುಲಿನ್ 104 ಸ್ಟಾಕ್ ಲಸಿಕೆಗಳು ಲಭ್ಯವಿದ್ದು ಎಲ್ಲಾ ನಾಯಿಗಳಿಗೆ ಲಸಿಕಾ ಚುಚ್ಚು ಮದ್ದುಗಳನ್ನು ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ರಾಷ್ಟ್ರೀಯ ರೇಬಿಸ್ ನಿಯಂತ್ರಣಾ ಕಾರ್ಯಕ್ರಮದ ಅಂಗವಾಗಿ ರೇಬಿಸ್ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರಗಳು ಹಾಗೂ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.