ಈ ಶಕ್ತಿ ಪೀಠ ಚಾಮುಂಡೇಶ್ವರಿ ದೇವಸ್ಥಾನ 18 ಶಕ್ತಿ ಪೀಠಗಳಲ್ಲಿ ಒಂದೆಂದು ಪ್ರಾಮುಖ್ಯ ಪಡೆದಿದೆ . ಒಬ್ಬ ಮಹಾಸತಿಯ ತಲೆ ಕೂದಲು ಉದುರಿಹೋಗುತ್ತಿದ್ದುದ್ದರಿಂದ ಈ ಕ್ಷೇತ್ರವನ್ನು ” ಕ್ರೌನ್ಛ ಕ್ಷೇತ್ರ ” ಅಥವ ” ಕ್ರೌನ್ಛ ಪುರಿ ” ಎಂದೂ ಸಹ ಪುರಾಣಕಾಲದಲ್ಲಿ ಕರೆಯಲಾಗುತ್ತಿತ್ತೆಂದು ಹೇಳುತ್ತಾರೆ .
ಸಾವಿರ ವರ್ಷಗಳಷ್ಟು ಹಿಂದಿನದು ಎಂದು ಹೇಳಲಾಗುವ ಈ ಚಾಮುಂಡೇಶ್ವರಿ ದೇವಸ್ಥಾನದ ನಿರ್ಮಾಣ ಮತ್ತು ಅಭಿವೃದ್ಧಿಗೆ ಹೊಯ್ಸಳರು , ವಿಜಯನಗರ ಸಾಮ್ರಾಜ್ಯದರಸರು ಹಾಗೂ ಮೈಸೂರು ಅರಸರ ಕೊಡುಗೆ ಅಪಾರವಾಗಿದೆ .
ಶ್ರೀ ಚಾಮುಂಡೇಶ್ವರಿ ದೇವಿಯ ಮೂಲ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಹೊಯ್ಸಳ ಅರಸರಿಂದ ನಿರ್ಮಾಣ ಗೊಂಡಿದೆ. ನಂತರ ವಿಜಯನಗರದರಸರಿಂದ 17 ನೇ ಶತಮಾನದಲ್ಲಿ ಗೋಪುರ ನಿರ್ಮಾಣ ಗೊಂಡಿ ತಾದರೂ 1830 ರಲ್ಲಿ ಮೈಸೂರು ಅರಸರು ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರವೇಶ ದ್ವಾರದ ಮೇಲೆ 7 ಅಂತಸ್ತಿನ ಸುಂದರವಾದ ಭವ್ಯ ರಾಜ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿ ಸ್ವರ್ಣ ಲೇಪಿತ ಕಲಶಗಳನ್ನು ಸ್ಥಾಪಿಸಿ ಸರ್ವತೋಮುಖ ಅಭಿವೃದ್ಧಿ ಗೆ ಪಾತ್ರರಾದರು .
ಈ ದೇವಸ್ಥಾನವು ಹೆಬ್ಬಾಗಿಲು , ಪ್ರವೇಶ ದ್ವಾರ , ನವರಂಗ , ಅಂತರಾಳ , ಗರ್ಭಗೃಹ , ಮತ್ತು ಪ್ರಾಕಾರಗಳನ್ನು ಹೊಂದಿವೆ . ಗರ್ಭಗುಡಿಯ ಮೇಲೆ ವಿಮಾನ ಶಿಖರಗಳಿವೆ .
ಗರ್ಭಗುಡಿಯಲ್ಲಿ ಎಂಟು ಭುಜಗಳನ್ನು ಹೊಂದಿರುವ ಮಹಿಷ ಮರ್ಧಿನಿ ಚಾಮುಂಡೇಶ್ವರಿ
ವಿಗ್ರಹ ವಿರಾಜಮಾನವಾಗಿದೆ .ಮಾರ್ಕಂಡೇಯ
ಮುನಿಗಳು ಪ್ರತಿಷ್ಠಾಪಿಸಿದರೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ .
ದೇವಸ್ಥಾನದ ಒಳಾವರಣದಲ್ಲಿ ಗಣಪತಿ ,ನಂದಿ , ಆಂಜನೇಯ ವಿಗ್ರಹಗಳು , ಧ್ವಜ ಸ್ತ0ಭ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ .
ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅವರ ಮೂವರು ಪತ್ನಿಯರಾದ ರಮಾವಿಲಾಸ , ಲಕ್ಶ್ಮಿವಿಲಾಸ , ಕೃಷ್ಣವಿಲಾಸ ರೊಂದಿಗೆ ಭಕ್ತಿ ಭಾವದಿಂದ ಕೈ ಮುಗಿದು ನಿಂತಿರುವ ಭಂಗಿಯ ವಿಗ್ರಹಗಳು ಭಕ್ತರಿಗೊಂದು ವಿಶಿಷ್ಟ ಅಕರ್ಷಣೆ .
ವರ್ಣರಂಜಿತ ಮಹಿಷಾಸುರ ಹಾವು ಹಾಗೂ ಖಡ್ಗವನ್ನು ಹಿಡಿದು ನಿಂತಿರುವ ಪ್ರತಿಮೆ ಬೆಟ್ಟಕ್ಕೆ ಭೇಟಿನೀಡುವವರನ್ನು ಸ್ವಾಗತಿಸುತ್ತದೆ . ಅಲ್ಲದೆ 15 ಅಡಿ ಎತ್ತರ , 25 ಅಡಿ ಅಗಲವಿರುವ ಏಕಶಿಲೆಯ ನಂದಿ , ಕುತ್ತಿಗೆಯಲ್ಲಿ ಆಭರಣಗಳನ್ನು ತೊಟ್ಟು ಕಂಗೊಳಿಸುವ ಸುಂದರ ಪ್ರತಿಮೆ ಭಕ್ತಿ ಭಾವ ಮೂಡಿಸುತ್ತದೆ .ನಾಡ ಹಬ್ಬ ನವರಾತ್ರಿಯಲ್ಲಿ ಪ್ರತಿದಿನ 9 ವಿವಿದ ರೀತಿಯಲ್ಲಿ ದೇವಿಯನ್ನು ಶೃಂಗರಿಸಿ , ಅಲಂಕರಿಸಿ ಆರಾಧಿಸಲಾಗುತ್ತದೆ.
ಮೈಸೂರು ಅರಸರು ಮುತ್ತು ರತ್ನ ಚಿನ್ನಾಭರಣಗಳನ್ನು ದೇಗುಲಕ್ಕೆ ಹೇರಳವಾಗಿ ಸಮರ್ಪಿಸಿದ್ದಾರೆ . ಚಿನ್ನದ ಉತ್ಸವ ಮೂರ್ತಿ , ಸೌಂದರ್ಯದ ಖನಿ ಅವುಗಳಲ್ಲಿ ಬೆಲೆ ಕಟ್ಟಲಾರದ್ದ.
ದೇಶದೆಲ್ಲೆಡೆಯಿಂದ ಅಪರಿಮಿತ ಭಕ್ತರು ದಿನನಿತ್ಯ, ಪ್ರತಿ ಆಷಾಡ ಶುಕ್ರವಾರ , ನವರಾತ್ರಿ , ಚಾಮುಂಡೇಶ್ವರಿ ಜಯಂತಿಯ ಆಚರಣೆಗೆ ಆಗಮಿಸಿ ಸೇವಾ ಕೈಂಕರ್ಯ ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ .
ಮತ್ತೊಂದು ಶ್ರೀ ತ್ರಿಪುರ ಸುಂದರಿ ದೇವಸ್ಥಾನ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿಯಲ್ಲಿ ಇದೆ. ಅಲ್ಲಿ ಚಾಮುಂಡೇಶ್ವರಿ ದೇವಿಯ ಸಹೋದರಿ ಜ್ವಾಲಾ ಮಾಲಿನಿ ದೇವಿ ಯನ್ನು ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ . ರಾಕ್ಷಸ ರಾಜ ಮಹಿಷಾಶೂರನನ್ನು ಯುದ್ಧದಲ್ಲಿ ಸಂಹರಿಸಲು ಜ್ವಾಲಾಮಾಲಿನಿ ಚಾಮುಂಡೇಶ್ವರಿಗೆ ಸಹಕರಿಸಿದಳು .
ಈ ದೇಗುಲ ಪವಿತ್ರ ಯಾತ್ರಾಸ್ಥಳ ಮತ್ತು ಪ್ರೇಕ್ಷಣೀಯ ಸ್ಥಳವೂ ಹೌದು.
ಲೇ: ಎಮ್ .ತುಳಸಿರಾಮ್