ಮಾನ್ಸೂನ್ ಋತುವಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದ್ದರೂ ಆಹಾರ ಭದ್ರತೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇಲ್ಲ ಅಂತೆಯೇ ಭಾರತದಲ್ಲಿ ಸಾಕಷ್ಟು ಆಹಾರ ದಾಸ್ತಾನುಗಳಿರುವುದರಿಂದ ಹಣದುಬ್ಬರದ ಮೇಲೆ ಕೂಡ ಇದು ಪರಿಣಾಮ ಬೀರುವುದಿಲ್ಲ ಎಂದು ಕೃಷಿ ಮತ್ತು ಆಹಾರ ನೀತಿ ತಜ್ಞರು ತಿಳಿಸಿದ್ದಾರೆ.
ಆದರೆ, ಮಳೆಯಲ್ಲಿ ಉಂಟಾದ ಏರುಪೇರು ವೈಯಕ್ತಿಕ ಮಟ್ಟದಲ್ಲಿ ರೈತರಿಗೆ ಹಾನಿಯನ್ನುಂಟು ಮಾಡಿದ್ದು ಅನೇಕ ರೈತರಿಗೆ ರಾಜ್ಯ ಸರಕಾರದ ನೆರವು ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರವು ಬಿಡುಗಡೆ ಮಾಡಿರುವ ಸುಧಾರಿತ ಅಂಕಿ ಅಂಶಗಳ ಪ್ರಕಾರ ಖಾರಿಫ್ ಅಕ್ಕಿಯ ಉತ್ಪಾದನೆಯು ಶೇ. 6 ದಷ್ಟು ಕುಸಿಯುವ ಸಾಧ್ಯತೆ ಇದ್ದು ಕಳೆದ ವರ್ಷ 111 ಮಿಲಿಯನ್ ಟನ್‌ನಷ್ಟಿದ್ದ ಅಕ್ಕಿ ಉತ್ಪಾದನೆಯು ಈ ವರ್ಷ 104.99 ಮಿಲಿಯನ್ ಟನ್‌ಗಳಿಗೆ ಕುಸಿದಿದೆ. ಇದಕ್ಕೆ ಕಾರಣ ಅಕ್ಕಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಬಿದ್ದಿರುವ ಅಸಮರ್ಪಕ ಮಳೆ ಎಂದಾಗಿದೆ.