ಭಾರತ ದೇಶವು ಶಾಂತಿಯನ್ನು ಬಯಸುತ್ತದೆ. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ನಿಲ್ಲಿಸಬಹುದು. ಉಭಯ ರಾಷ್ಟ್ರಗಳ ಯುದ್ಧದ ವಿಚಾರದಲ್ಲಿ ಭಾರತ ಶಾಂತಿಯ ಪರವಾಗಿದೆ. ಹಾಗೂ ಅದೇ ನಿಲುವನ್ನು ಮುಂದುವರಿಸುತ್ತದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ 77ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನೀವು ಯಾರ ಪರವಾಗಿದ್ದೀರಿ ಎಂದು ನಮಗೆ ಸಾಮಾನ್ಯವಾಗಿ ಕೇಳಲಾಗುತ್ತದೆ. ನಮ್ಮ ಉತ್ತರವಿಷ್ಟೇ, ನಾವು ನೇರವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುತ್ತೇವೆ. ನಾವು ಶಾಂತಿಯ ಪರವಾಗಿದ್ದೇವೆ. ಮತ್ತು ಆ ನಿರ್ಧಾರದಲ್ಲೇ ಉಳಿಯುತ್ತೇವೆ ಎಂದರು.
ವಿಶ್ವಸಂಸ್ಥೆಯ ಮೂಲ ತತ್ವಗಳನ್ನು ಗೌರವಿಸುವ ಪರವಾಗಿ ನಾವಿದ್ದೇವೆ ಎಂದು ಜೈಶಂಕರ್ ಅವರು ಭಾರತ- ಉಕ್ರೇನ್ ಯುದ್ಧದ ವಿಚಾರವಾಗಿ ಭಾರತದ ನಿಲುವನ್ನು ಪುನರುಚ್ಚರಿಸಿದರು.
ನಡೆಯುತ್ತಿರುವ ಉಕ್ರೇನ್ ಸಂಘರ್ಷದ ಪರಿಣಾಮಗಳು ಆರ್ಥಿಕ ಒತ್ತಡಗಳನ್ನು ವಿಶೇಷವಾಗಿ ಆಹಾರ ಮತ್ತು ಶಕ್ತಿಯ ಮೇಲೆ ಮತ್ತಷ್ಟು ಹೆಚ್ಚಿಸಿವೆ ಎಂದು ಜೈಶಂಕರ್ ವಿಶ್ವವೇದಿಕೆಯಲ್ಲಿ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೈಶಂಕರ್ ಅವರು ಭಯೋತ್ಪಾದನೆಯ ವಿರುದ್ಧ ಭಾರತದ ಅಸಹಿಷ್ಣುತೆಯನ್ನು ಮತ್ತೆ ಪ್ರತಿಪಾದಿಸಿದರು.
ದಶಕಗಳ ಕಾಲ ಗಡಿಯಾಚೆಗಿನ ಭಯೋತ್ಪಾದನೆಯ ಭಾರವನ್ನು ಹೊತ್ತಿರುವ ಭಾರತವು ‘ಶೂನ್ಯ-ಸಹಿಷ್ಣುತೆ’ ವಿಧಾನವನ್ನು ದೃಢವಾಗಿ ಪ್ರತಿಪಾದಿಸುತ್ತದೆ. ನಮ್ಮ ದೃಷ್ಟಿಯಲ್ಲಿ ಯಾವುದೇ ಭಯೋತ್ಪಾದಕ ಕೃತ್ಯಕ್ಕೆ ಯಾವುದೇ ಸಮರ್ಥನೆ ಸಲ್ಲದು. ಎಷ್ಟೇ ವಾಕ್ಚಾತುರ್ಯವಿದ್ದರೂ, ಎಷ್ಟೇ ಪವಿತ್ರವಾದುದಾದರೂ ರಕ್ತದ ಕಲೆಗಳನ್ನು ಎಂದಿಗೂ ಮುಚ್ಚುವುದಿಲ್ಲ “ಎಂದು ಜೈಶಂಕರ್ ಹೇಳಿದರು.