ನವಾಬ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ರಾಜಕೀಯ ಒಳಸಂಚಿಗೆ ಮೈಸೂರು ಅರಸರು ಒಳಗಾಗಿ ರಾಜ್ಯಾಧಿಕಾರದಿಂದ ದೂರಸರಿಸಲ್ಪಟ್ಟ ಸಮಯದಲ್ಲಿ (1734 – 1799 ) ರಾಜ ಮನೆತನ ದವರು ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು.
ಆದರೆ, ದುಃಖ , ಸಂಕಟ , ಅವಮಾನಗಳಿಂದ ಮನ ನೊಂದು ರಾಜ್ಯಭಾರ ವನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಎರಡನೇ ಕೃಷ್ಣ ರಾಜ ಒಡೆಯರ ವರ ಧರ್ಮಪತ್ನಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಯವರು ದೇವರ ಮೊರೆಯೊಗಿದ್ದರು. ಆಗ ದೇವರು ಕನಸಿನಲ್ಲಿ ಮೂಡಿಬಂದು ಶ್ರೀರಂಗ ಪಟ್ಟಣದ ಸಮೀಪ ಇರುವ ಬಲಮುರಿಯಲ್ಲಿರುವ ವೆಂಕಟೇಶ್ವರ ಮೂರ್ತಿಯನ್ನು ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಲು ಸೂಚಿಸಿದರು. ಆ ಮೇರೆಗೆ ಸುಲ್ತಾನರ ಗಮನಕ್ಕೆ ಬರದಂತೆ ಗುಟ್ಟಾಗಿ ಮೈಸೂರು ಅರಮನೆ ಆವರಣದಲ್ಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಆರಾಧಿಸಿದ ರೆಂಬುದು ಒಂದು ದಂತ ಕಥೆ ಪ್ರಚಲಿತದಲ್ಲಿದೆ. ಬಳಿಕ ಟಿಪ್ಪುಸುಲ್ತಾನ್ 1799 ರ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಮಡಿದಾಗ , ಮೈಸೂರು ಅರಸರು ರಾಜ್ಯಾಧಿಕಾರವನ್ನು ಮರುಪಡೆದರು .ಅಲ್ಲದೆ 5 ವರ್ಷದ ಬಾಲಕ ಮೂರನೇ ಕೃಷ್ಣರಾಜ ಒಡೆಯರ್ ರಿಗೆ , ಜೂನ್ 30 , 1799 ರಲ್ಲಿ ಪಟ್ಟಾಭಿಷೇಕವಾಯಿತು.
ನಂತರ ಮೂರನೇ ಕೃಷ್ಣರಾಜ ಒಡೆಯರ್ ರವರು ಅವರ ಆಡಳಿತಾವಧಿಯಲ್ಲಿ 1825 ರಲ್ಲಿ ಕಿಲ್ಲೆ ವೆಂಕಟರಮಣಸ್ವಾಮಿ ದೇವಸ್ಥಾನವನ್ನು ಮೈಸೂರು ಕೋಟೆಯ ಪಶ್ಚಿಮ ಭಾಗದಲ್ಲಿ ನಿರ್ಮಿಸಿದರು.
ಮೈಸೂರು ಅರಸರ ಇತಿಹಾಸದಲ್ಲಿ ಈ ದೇವಸ್ಥಾನ ಪ್ರಾಮುಖ್ಯತೆ ಪಡೆದಿದೆ.
ಲೇ:ಎಂ.ತುಳಸಿರಾಂ.ಮೈಸೂರು