ರಷ್ಯಾ ಸೇನೆಯೂ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧರಿಸಿದಂತೆ. ಹೀಗಾಗಿ ತನ್ನ ಸೇನೆಯನ್ನು ಭಾಗಶಃ ಸಜ್ಜುಗೊಳಿಸುವಂತೆ ಆದೇಶ ನೀಡಿದ್ದಾರೆ.
ಇದರ ಬೆನ್ನಲ್ಲೇ ರಷ್ಯಾದಲ್ಲಿ 18 ರಿಂದ 65 ವಯಸ್ಸಿನವರೆಗಿನ ಪುರುಷರಿಗೆ ವಿಮಾನದ ಟಿಕೆಟ್ ನೀಡುವುದನ್ನು ತಡೆಯಲು ರಷ್ಯಾದ ಏರ್‌ಲೈನ್ಸ್ ಆದೇಶ ನೀಡಿದೆ.
ಪುಟಿನ್ ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಹೆಚ್ಚಿಸಲು ಸೇನೆಯನ್ನು ಸಜ್ಜುಗೊಳಿಸುತ್ತಿರುವುದಾಗಿ ತಿಳಿಸಿದ ತಕ್ಷಣ ರಷ್ಯಾದಿಂದ ಹೊರಡುತ್ತಿರುವ ಎಲ್ಲಾ ವಿಮಾನಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ವರದಿಯಾಗಿದೆ.
ಅಲ್ಲಿನ ಜನರು ಅರ್ಮೇನಿಯಾ, ಜಾರ್ಜಿಯಾ, ಅಜರ್‌ಬೈಜಾನ್, ಕಝಾಕಿಸ್ತಾನ ಸೇರಿದಂತೆ ಹತ್ತಿರದ ದೇಶಗಳಿಗೆ ಹೋಗಲು ಮುಂದಾಗುತ್ತಿದ್ದಾರೆ.
ಪುಟಿನ್ ಅವರ ಭಾಷಣದ ಬಳಿಕ ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ಅವರು ದೇಶದ ಸುಮಾರು 3 ಲಕ್ಷ ಪುರುಷರನ್ನು ಸೇನೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದೀಗ ಸಮರ ಕಾನೂನನ್ನು ವಿಧಿಸುವ ಸಾಧ್ಯತೆಗಳ ನಡುವೆಯೇ ರಷ್ಯಾದ ವಿಮಾನಯಾನ ಸಂಸ್ಥೆ 18 ರಿಂದ 65 ವಯಸ್ಸಿನ ನಡುವಿನ ಪುರುಷರಿಗೆ ರಷ್ಯಾದಿಂದ ಹೊರ ಹೋಗಲು ಟಿಕೆಟ್ ನೀಡುವುದನ್ನು ತಡೆಹಿಡಿದಿದೆ.
ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಆದರೂ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ನಿಲ್ಲಿಸಲು ನಿರಾಕರಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುತ್ತಿರುವುದಕ್ಕೆ ಕೋಪಗೊಂಡಿರುವ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನೂ ಬಳಸುವ ಬಗ್ಗೆ ಸುಳಿವು ನೀಡಿದ್ದಾರೆ.
ಆ ಕಡೆ ಉಕ್ರೇನ್‌ನಲ್ಲಿ ಯುದ್ಧಕ್ಕೆ ಸೇರಲು ಜೈಲಿನಲ್ಲಿರುವ ಕೈದಿಗಳನ್ನೂ ನೇಮಿಸಲಾಗುತ್ತಿರುವುದಾಗಿ ವರದಿಯಾಗಿದೆ. ಸೇನೆಗೆ ಸೇರುವ ಎಲ್ಲಾ ಕೈದಿಗಳಿಗೂ 6 ತಿಂಗಳ ಬಳಿಕ ಅಧ್ಯಕ್ಷೀಯ ಕ್ಷಮಾದಾನ ಹಾಗೂ ತಿಂಗಳಿಗೆ ಭಾರೀ ಮೊತ್ತದ ಸಂಬಳ ನೀಡುವುದಾಗಿ ಭರವಸೆಯ ಆಫರ್ ನೀಡಲಾಗಿದೆ.