ಓಣಂ ಹಬ್ಬದ ಬಳಿಕ ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಕೋವಿಡ್-19 ಸೋಂಕು ಪ್ರಮಾಣ ಶೇ.50ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ರವಿವಾರ ಕೊನೆಗೊಂಡ ಒಂದು ವಾರದ ಅವಧಿಯಲ್ಲಿ ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳವಾಗಿ ಏಳುವಾರದಲ್ಲೇ ಗರಿಷ್ಠ ಪ್ರಕರಣಗಳು ದಾಖಲಾಗಿವೆ.
ಸೆಪ್ಟೆಂಬರ್ 12 ರಿಂದ 18ರ ಅವಧಿಯಲ್ಲಿ ಕೇರಳದಲ್ಲಿ 14,865 ಕೋವಿಡ್-19 ಸೋಂಕು ದಾಖಲಾಗಿದ್ದು, ಇದು ಹಿಂದಿನ ಒಂದು ವಾರದ ಅವಧಿಯಲ್ಲಿ 9805 ಆಗಿತ್ತು. ದೇಶದಲ್ಲಿ ಒಟ್ಟು ದಾಖಲಾದ ಪ್ರಕರಣಗಳ ಪೈಕಿ ಕೇರಳದ ಪಾಲು ಶೇಕಡ 39ರಷ್ಟಾಗಿದೆ.
ದೇಶದಲ್ಲಿ ಒಟ್ಟಾರೆಯಾಗಿ ಕಳೆದ ಒಂದು ವಾರದ ಅವಧಿಯಲ್ಲಿ 38500 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರ ದಾಖಲಾದ 37670 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 2ರಷ್ಟು ಅಧಿಕ.
ಕೇರಳದಲ್ಲಿ ಕಳೆದ ಎರಡು ವರ್ಷಗಳಲ್ಲೂ ಓಣಂ ಬಳಿಕದ ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗಿತ್ತು.
ಈ ವಾರಕ್ಕೆ ಮುನ್ನ, ದೇಶದ ಒಟ್ಟು ಪ್ರಕರಣಗಳ ಪೈಕಿ ಕೇರಳದ ಪಾಲು ಜುಲೈ ಕೊನೆಯ ವಾರದಿಂದ ಇಳಿಮುಖವಾಗುತ್ತಾ ಬಂದಿತ್ತು.
ಕೇರಳ ಹೊರತುಪಡಿಸಿದರೆ, ಬಂಗಾಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.
ಒಂದು ವಾರದ ಅವಧಿಯಲ್ಲಿ ಶೇಕಡ 20ರಷ್ಟು ಪ್ರಕರಣಗಳು ಹೆಚ್ಚಿ ಒಟ್ಟು ಪ್ರಕರಣಗಳ ಸಂಖ್ಯೆ 1726ಕ್ಕೇರಿದೆ.
ತಮಿಳುನಾಡಿನಲ್ಲಿ ಶೇಕಡ 1.5ರಷ್ಟು ಪ್ರಕರಣಗಳು ಹೆಚ್ಚಿ ಒಂದು ವಾರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 3147ಕ್ಕೇರಿದೆ ಎಂದು ವರದಿಯಾಗಿದೆ.