ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಮತ್ತು ವಿವಿಧೆಡೆ ಸಿದ್ಧತೆ ಆರಂಭವಾಗಿದೆ.
ಸೆ.20ರ ಮಂಗಳವಾರದಿಂದ ಸಿಂಹಾಸನ ಜೋಡಣೆ ಆರಂಭವಾಗಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಗೆ ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೆ.26ರಂದು ಖಾಸಗಿ ದರ್ಬಾರ್ ಹಾಗೂ ವಿವಿಧ ಪೂಜೆಗಳು, ಧಾರ್ಮಿಕ ವಿಧಿಗಳು ನೆರವೇರಲಿವೆ. ಅಂದೂ ಸಹ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಅಕ್ಟೋಬರ್ 4ರಂದು ಅರಮನೆಯಲ್ಲಿ ಆಯುಧಪೂಜೆ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅ.5ರಂದು ವಿಜಯದಶಮಿ ಆಚರಣೆ ಇರುತ್ತದೆ. ಅಂದೂ ಸಹ ಸಂಪೂರ್ಣ ಅರಮನೆ ಪ್ರವೇಶಕ್ಕೆ ನಿರ್ಬಂಧವಿದೆ. ಅ.20ರಂದು ಸಿಂಹಾಸನ ವಿಸರ್ಜನೆ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರುತ್ತದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಮಾಹಿತಿ ನೀಡಿದ್ದಾರೆ.
ಜಗದ್ವಿಖ್ಯಾತ ಮೈಸೂರು ದಸರಾ ಉತ್ಸವ ಸೆಪ್ಟೆಂಬರ್ 26ರಿಂದ ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
2022ರ ಮೈಸೂರು ದಸರಾ ಉತ್ಸವಕ್ಕೆ ಗೋಲ್ಡ್ ಪಾಸ್ ಇರುವುದಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಗಣ್ಯರು, ವಿದೇಶಿಗರು ಹೆಚ್ಚಾಗಿ ಗೋಲ್ಡ್ ಪಾಸ್ ಅವಲಂಬಿಸಿದ್ದರು. ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್ನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿವಿಐಪಿ ಪಾಸ್ ಹಾಗೂ ಕರ್ತವ್ಯನಿರತ ಪಾಸ್ ಹೊರತುಪಡಿಸಿ ಉಳಿದ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ಮಾಡಲಾಗಿದೆ.
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಬಂದಿದೆ. 4 ಹೆಣ್ಣಾನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಗೋಪಾಲಸ್ವಾಮಿ, ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ವಿಕ್ರಮ, ಧನಂಜಯ, ಕಾವೇರಿ, ಗೋಪಿ, ಶ್ರೀರಾಮ, ವಿಜಯಾ, ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಪ್ರತಿದಿನ ತಾಲೀಮು ಮಾಡುತ್ತಿವೆ ಎಂದು ತಿಳಿದುಬಂದಿದೆ.