ಒಮ್ಮೊಮ್ಮೆ ನನಗೆ ಅನ್ಸುತ್ತೆ…! ಮನುಷ್ಯ ಕೆಲವೊಂದು ಬಾರಿ ಎಷ್ಟೊಂದು ಕ್ರೂರಿ ಆಗಿಬಿಡುತ್ತಾನೆ ಅಂತ…
ನಾನು ಯಾಕ್ ಈ ಮಾತನ್ನ ಹೇಳ್ತಾ ಇದೀನಿ ಅಂದ್ರೆ… ಮೊನ್ನೆ ನಾನು ಊರಿಗೆ ಹೋಗಲು ಬಸ್ ನಲ್ಲಿ ಕುಳಿತ್ತಿದ್ದೆ. ಬಸ್ ಹೊರಡಲು ಇನ್ನೂ ಸ್ವಲ್ಪ ಸಮಯವಿತ್ತು. ನಾನು ಕಿಟಕಿ ಬಳಿ ಕುಳಿತು ಹೊರಗೆ ಕಣ್ಣಾಡಿಸುತ್ತಿದ್ದೆ. ಆಗ ಅಲ್ಲೊಂದು ನಾಯಿ ರಸ್ತೆಯ ಬದಿ ಬಿದ್ದ ಚೂರು ಪಾರು ತಿಂಡಿ ತಿನಿಸುಗಳನ್ನು ಹೇರಕುತ್ತಿತ್ತು.
ಅಷ್ಟರಲ್ಲಿ ಒಂದು ಕಾರು ಬರ್ರನೇ ಬಂದು ರಸ್ತೆಯ ಬದಿ ಇದ್ದ ನಾಯಿಯ ಮೇಲೆ ತನ್ನ ಚಕ್ರವನ್ನು ಹರಿಸಿತು.
ಆಗ ನಾನು ಸೇರಿದಂತೆ ಅಲ್ಲಿರುವ ಕೆಲವು ಮಂದಿಗಳು ಅಯ್ಯೋ…! ಎಂದು ಕಿರಿಚಿದೇವು… ಆದರೆ, ಕಾರು ಚಾಲಕ ತನ್ನ ಗಾಡಿಯನ್ನು ನಿಲ್ಲಿಸದೇ ಹೋಗಿ ಬಿಟ್ಟ. ಅಷ್ಟರೊಳಗೆ ಪಾಪ ಆ ನಾಯಿಯ ಕಿವಿ,ಮೂಗು ಗಳಿಂದ ರಕ್ತ ಬರಲಾರಂಭಿಸಿತ್ತು. ಜೊತೆಗೆ ಹೊಟ್ಟೆಯ ಭಾಗದಲ್ಲಿ ಜಜ್ಜಿ ಅಪ್ಪಚ್ಚಿಯಾಗಿ ಹೋಗಿತ್ತು. ಪಾಪ ನಾಯಿ ನರಳಿ ನರಳಿ ತನ್ನ ಪ್ರಾಣವನ್ನು ಬಿಟ್ಟಿತ್ತು…
ನನಗೆ ಅನ್ಸುತ್ತೆ, ಆ ಕಾರುಚಾಲಕನಿಗೆ ಕರುಣೆಯೇ ಇಲ್ಲವೇನು ಅಂತ. ಆತನಿಗೆ ತನ್ನಿಂದ ಒಂದು ಜೀವ ಹೋಗುತ್ತಿದೆ ಎಂಬ ಪಶ್ಚತಾಪ ಇಲ್ಲವೇನು…?
ಮನುಷ್ಯ ಕ್ರೂರ ಪ್ರಾಣಿ ನಿಜ. ಆದರೆ, ತನ್ನಂತೆಯೇ ಪ್ರಾಣಿಗಳಿಗೂ ಮನಸ್ಸು ಇರುತ್ತದೆ ಎಂಬ ಸತ್ಯ ತಿಳಿದುಕೊಳ್ಳದೇ ಇರುವಷ್ಟು ದಡ್ಡನಲ್ಲ.
ಪ್ರಾಣಿಗಳು ನಮ್ಮಂತೆಯೇ ಕುಟುಂಬಗಳನ್ನ ಒಳಗೊಂಡಿರುತ್ತದೆ. ನಿಮ್ಮ ಮನೆಯಲ್ಲಿನ ಮಕ್ಕಳು ಪೇಟೆಯಿಂದ ಹೇಗೆ ನೀವು ತರುವ ತಿಂಡಿ ತಿನಿಸುಗಳನ್ನು ತಿನ್ನಲು ಕಾದು ಕುಳಿತಿರುತ್ತಾರೋ, ಹಾಗೆಯೇ ಪ್ರಾಣಿಗಳ ಮರಿಗಳು ಕೂಡ ಕಾದು ಕುಳಿತಿರುತ್ತವೆ.
ಸ್ನೇಹಿತರೇ,ಒಮ್ಮೆ ಯೋಚಿಸಿ ನಾವು ಚಿಕ್ಕ ಇಂಜೆಕ್ಷನ್ ಸೂಜಿಗೆ ನೋವು ಅಂತ ಹೆದುರುತ್ತೇವೆ. ಆದ್ರೇ, ಈ ರೀತಿ ಗಾಯಗೊಂಡು ತಮ್ಮ ಪ್ರಾಣ ಹೋಗುತ್ತಿರುವಾಗ ಆ ಮೂಖ ಪ್ರಾಣಿಗಳು ಎಷ್ಟೊಂದು ನೋವು ಅನುಭವಿಸುತ್ತವೆ ಎಂದು ಯೋಚಿಸಿ…
ಇನ್ನು ಮುಂದೆ ವಾಹನ ಚಾಲನೆ ಮಾಡ್ತಾ ನೀವು ಎಚ್ಚರವಾಗಿರಿ… ಜೊತೆಗೆ ಆ ಬಡ ಪ್ರಾಣಿಗಳನ್ನು ಬದುಕಲು ಬಿಡಿ…
- ರಚನಾ.ಕೆ.ಆರ್