ಜಗತ್ತಿನಲ್ಲಿ ಇರುವ ಪ್ರತಿಯೊಂದು ಸಂಬಂಧಕ್ಕೂ ಒಂದೊಂದು ವಿಶೇಷ ದಿನವಿದೆ.. ಅಪ್ಪಂದಿರ ದಿನ, ಅಮ್ಮಂದಿರ ದಿನ, ಪೋಷಕರ ದಿನ, ಸಹೋದರರ ದಿನ ಇರುವಂತೆ ಅಜ್ಜ ಅಜ್ಜಿಯರ ದಿನವೂ ಇದೆ..
ಜಗತ್ತಿನಾದ್ಯಂತ ಸೆಪ್ಟೆಂಬರ್ 11ರಂದು ವಿಶ್ವ ಗ್ರ್ಯಾಂಡ್ ಪೇರೆಟ್ಸ್ ಡೇ ಆಚರಿಸಲಾಗುತ್ತದೆ. ವಿವಿಧ
ಕಡೆ ಸೆ. 12ರಂದು ಈ ದಿನವನ್ನು ಆಚರಿಸಲಾಗುತ್ತದೆ.
ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಈ ದಿನವನ್ನು ಸೆಲಬ್ರೇಟ್ ಮಾಡಲಾಗುತ್ತದೆ. ಅಮೆರಿಕದಲ್ಲಿ ಕಾರ್ಮಿಕರ ದಿನದ ನಂತರ ಸಿಗುವ ಮೊದಲ ಭಾನುವಾರದಂದು ಅಜ್ಜ ಅಜ್ಜಂದಿರ ದಿನವನ್ನು ಆಚರಿಸಲಾಗುತ್ತದಂತೆ..
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರೂ ಸೇರಿದಂತೆ ಅಜ್ಜ ಅಜ್ಜಿಯ ಪಾತ್ರವೂ ಬಹುಮುಖ್ಯ.. ಈಗ ಕಾಲ ಬದಲಾಗಿದೆ, ಒಂದು ಕುಟುಂಬವೆಂದರೆ ಅಪ್ಪ ಅಮ್ಮ ಮಕ್ಕಳು ಅಷ್ಟೇ ಎನ್ನುವಂತಾಗಿದೆ. ಅವಿಭಕ್ತ ಕುಟುಂಬಗಳು ಈಗ ತೀರಾ ವಿರಳ ಎಂದರೆ ತಪ್ಪಾಗಲಾರದು..
ಅಜ್ಜ ಅಜ್ಜಿ ಇರುವ ಕುಟುಂಬದಲ್ಲಿ ಬೆಳೆದ ಮಕ್ಕಳ ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ನೀಡುವ ಪ್ರೀತಿ ಸ್ಪಟಿಕದಷ್ಟು ಸ್ವಚ್ಛ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ.
ಈಗ ಭಾರತದಲ್ಲಿ ಕೂಡು ಕುಟುಂಬಗಳು ಅಪರೂಪವಾಗುತ್ತಿರುವಂತೆಯೇ ಮಕ್ಕಳಿಗೆ ಅಜ್ಜ ಅಜ್ಜಂದಿರ ಪ್ರೀತಿ ಸಿಗುವುದು ದುಸ್ತರವಾಗುತ್ತದೆ. ವೃದ್ಧರನ್ನು ಸ್ವಗ್ರಾಮದಲ್ಲಿ ಒಂಟಿಯಾಗಿ ಬಿಟ್ಟು ದೂರದೂರಿನಲ್ಲಿ ಸಂಸಾರ ಮಾಡಿಕೊಳ್ಳುವ ಜನರೇ ಹೆಚ್ಚು. ಹಬ್ಬ ಹರಿದಿನಗಳಿಗಷ್ಟೇ ವೃದ್ಧರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಭೇಟಿ ಮಾಡುವ ಅವಕಾಶ. ಹಾಗೆ ಇದೆ ಇಂದಿನ ಪರಿಸ್ಥಿತಿ ಕೂಡ.
ಮಕ್ಕಳಿಗೆ ಅಜ್ಜಿ-ಅಜ್ಜ ಅಂದ್ರೆ ಅದೆಷ್ಟು ಪ್ರೀತಿ. ಕೆಲವು ಮಕ್ಕಳು ಅಪ್ಪ-ಅಮ್ಮನಿಗಿಂತ ಹೆಚ್ಚು ಅಜ್ಜಿ-ತಾತಾನನ್ನು ಇಷ್ಟ ಪಡುತ್ತಾರೆ. ಅವರ ಖುಷಿಯಲ್ಲಿ ಅಜ್ಜಿ ಇರಲೇಬೇಕು. ಅವರ ಕಷ್ಟಕ್ಕೆ ಅಜ್ಜ ಬೇಕೇ ಬೇಕು. ಇತ್ತೀಚೆಗೆ ಕೂಡು ಕುಟುಂಬ ಇಲ್ಲದೇ ಮಕ್ಕಳು ಎಲ್ಲರನ್ನೂ ಅಂಕಲ್, ಆಂಟಿ ಎಂದು ಕರೆಯುವ ಪರಿಸ್ಥಿತಿ ಬಂದಿದೆ.
ಅಜ್ಜ ಅಜ್ಜಿಯ ಜೊತೆ ಕಾಲ ಕಳೆದು ಅವರೊಂದಿಗೆ ಇರುವವರೇ ಅದೃಷ್ಟವಂತರು. ಕೆಲವೊಮ್ಮೆ ನಾವು ನಮ್ಮ ಅವಸರದ ಬದುಕಿನಲ್ಲಿ ಅಜ್ಜ-ಅಜ್ಜಿಯರು ಎಷ್ಟು ಮುಖ್ಯ ಎನ್ನುವುದನ್ನೇ ಮರೆತುಬಿಡುತ್ತೇವೆ. ಅವರು ಮೊಮ್ಮಕ್ಕಳಿಗಾಗಿ ತೋರುವ ಪ್ರೀತಿಯನ್ನು ಯಾರಿಂದಲೂ ತೋರಿಸಲು ಸಾಧ್ಯವಿಲ್ಲ.
ನಾವು ಏನಾದರು ತಪ್ಪು ಮಾಡಿದಾಗ ಬೈಯುವುದು ಅಮ್ಮನಾದರೆ ಅಮ್ಮನ ಹೊಡೆತದಿಂದ ಉಳಿಸುವುದು ಅಜ್ಜಿಯೇ.. ಅವರೊಂದಿಗೆ ಕಳೆಯುವ ಸಮಯ ಅತ್ಯದ್ಭುತ.. ಸದಾ ನಮ್ಮ ಒಳಿತನ್ನೇ ಬಯಸುತ್ತಾ, ನಾವು ಯಶಸ್ಸನ್ನು ಕಂಡಾಗ ನಮಗಿಂತಲೂ ಹೆಚ್ಚು ಸಂತೋಷ ಪಡುತ್ತಾ ,ದೇವರಲ್ಲಿ ತಮ್ಮ ಮೊಮ್ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬೇಡುವ ಅಜ್ಜ ಅಜ್ಜಿಗೆ ಒಂದು ಮೆಚ್ಚುಗೆಯ ಅಪ್ಪುಗೆ ನೀಡುವುದು ಬೇಡವೇ?
ಒತ್ತಡದ ಕೆಲಸದ ನಡುವೆಯೂ ಅವರನ್ನು ಆಗಾಗ ಭೇಟಿ ಮಾಡಿ, ಸಮಯ ಕಳಿಯಿರಿ. ಇಂದಿನ ಆಧುನಿಕ ಬದುಕಿಗೂ , ಅವರ ಕಾಲದ ಜೀವನಕ್ಕೂ ಇರುವ ವ್ಯತ್ಯಾಸಗಳನ್ನ ಅವರಿಗಿಂತ ಚೆನ್ನಾಗಿ ಬೇರೆ ಯಾರೂ ಹೇಳಲಾರರು.. ಮೊಬೈಲ್ , ವಿಡಿಯೋ ಗೇಮ್ ಗಳಿಂದ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು
ನಿಮ್ಮ ರಜಾದಿನಗಳಲ್ಲಿ ಅಥವಾ ವಾರಾಂತ್ಯಗಳಲ್ಲಿ ಅವರ ಸ್ಥಳದಲ್ಲಿ ಕಳೆಯಿರಿ.
ನೀವು ಭೇಟಿ ನೀಡಿದಾಗಲೆಲ್ಲಾ ಅವರು ನಿಮ್ಮ ನೆಚ್ಚಿನ ಅಡುಗೆಯನ್ನು ಮಾಡುತ್ತಾರೆ. ಅದನ್ನ ಸವಿದು, ಅವರೊಂದಿಗೆ ಸಮಯ ಕಳೆಯಿರಿ. ಅವರು ಅವರು ಹೇಳುವ ಕಥೆಗಳನ್ನು ಕೇಳಿ.. ಅದಕ್ಕಿಂತ ಹೆಚ್ಚು ಏನನ್ನೂ ಬಯಸೊದಿಲ್ಲ.
ಅವರ ಆರೋಗ್ಯದ ಮೇಲೆ ನಿಗಾ ಇರಿಸಿ. ಸಮಯಕ್ಕೆ ಸರಿಯಾಗಿ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಿರಿ.
ಅವರ ನೋವನ್ನು ನಿವಾರಿಸಲು ಅವರಿಗೆ ಬಿಸಿ ಎಣ್ಣೆ ಹಚ್ಚಿ, ಅವರ ಕಾಲುಗಳು ಅಥವಾ ಪಾದಗಳನ್ನು ಮಸಾಜ್ ಮಾಡಿ. ಅವರ ಅಗತ್ಯಗಳಿಗೆ ಒಲವು ತೋರಿ.
ಕೆಲವೊಮ್ಮೆ, ಅವರು ತಮ್ಮ ನೋವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬಹುದು.
ವೃದ್ಧಾಪ್ಯದಲ್ಲಿ, ಅವರು ಒಂಟಿಯಾಗಬಹುದು, ಆದ್ದರಿಂದ ನಿಯಮಿತವಾಗಿ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಿರಿ.
ಅಂದಹಾಗೆ, ಈ ಅಜ್ಜ -ಅಜ್ಜಿಯರ ದಿನದ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಹಿರಿಯ ನಾಗರಿಕರ ಪರ ವಕೀಲರಾದ ಮರಿಯನ್ ಮೆಕ್‍ಕ್ವಾಡ್ ಅವರು. ಅವರಿಗೊಂದು ಸಲಾಮ್..