ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರವೂ ವರುಣಾರ್ಭಟ ಮುಂದುವರಿದ್ದು, ಮುಂದಿನ 4 ದಿನ ಇನ್ನೂ ಹೆಚ್ಚು ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಬೆಳಗಾವಿಯಲ್ಲಿ ಮುಂದಿನ 48 ಗಂಟೆ ಸುರಿಯುತ್ತಿರುವ ಮಳೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಸನ, ಶಿವಮೊಗ್ಗ, ಬಾಗಲಕೋಟೆ, ಯಾದಗಿರಿ, ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಸೆ.8 ಮತ್ತು ಸೆ.9ರಂದು ಯೆಲ್ಲೋ ಅಲರ್ಟ್ ಇರಲಿದೆ.
ಹಾವೇರಿಯ ಗುಟ್ಟಲ್, ಯಾದಗಿರಿಯ ಕಕ್ಕೇರಿ, ಗದಗ, ತುಮಕೂರಿನ ತಿಪಟೂರು, ಚಿಕ್ಕಮಗಳೂರಿನ ಅಜ್ಜಂಪುರ, ಮಂಗಳೂರು, ಉಡುಪಿ ಬ್ರಹ್ಮವಾರ ಮತ್ತು ಪುತ್ತೂರಿನಲ್ಲಿ ಸರಾಸರಿ 10-12 ಸೆಂಮೀ ಮಳೆ ಬಿದ್ದಿದೆ.
ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆ ಆರ್ಭಟ ಇದ್ದರೆ, ಉಳಿದೆಡೆ ಆಗಾಗ್ಗೆ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.