ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದೆ.
ಟಾಪರ್ಗಳ ಸಾಲಿನಲ್ಲಿ ರಾಜ್ಯದ ಆರು ವಿದ್ಯಾರ್ಥಿಗಳು ಮಿಂಚಿದ್ದಾರೆ.
ಬಾಲಕರ ಟಾಪ್ ಟೆನ್ ಪಟ್ಟಿಯಲ್ಲಿ ರಾಜ್ಯದ ಮೂವರು ಹಾಗೂ ಬಾಲಕಿಯರ ವಿಭಾಗದಲ್ಲಿ ಮೂವರು ಸೇರಿದ್ದಾರೆ.
ರಾಜ್ಯದ ಹೃಷಿಕೇಶ್ ನಾಗಭೂಷಣ ಗಂಗೂಲೆ 715 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಎಸ್.ಆರ್. ಕೃಷ್ಣ 710 ಅಂಕ ಪಡೆದು 8ನೇ ಸ್ಥಾನದಲ್ಲಿದ್ದಾರೆ. ವೃಜೇಶ್ ವೀಣಾಧರ ಶೆಟ್ಟಿ 13ನೇ ರ್ಯಾಂಕ್ ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ರುಚಾ ಪಾವಶೆ ಎರಡನೇ ರ್ಯಾಂಕ್ ಪಡೆದಿದ್ದರೆ, ಅಖಿಲ ಭಾರತ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಾಲಕಿಯರಲ್ಲಿ ಶುಭಾ ಕೌಶಿಕ್ 7, ಮುರುಕಿ ಶ್ರೀ ಬಾರುಣಿ ಬಾಲಕಿಯರಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ.
ದೇಶಾದ್ಯಂತ 3,750 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು.