ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ಅವರಿಂದು ವಿಧಿವಶರಾಗಿದ್ದಾರೆ.ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದಾಗ ಅವರಿಗೆ ರಾತ್ರಿ 10 ಗಂಟೆ ಸಚಿವ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಉಮೇಶ್ ಕತ್ತಿ ಅಸುನೀಗಿದ್ದಾರೆ..
1960ರಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಉಮೇಶ ಜನಿಸಿದರು. ಇವರ ತಂದೆ ಹಿರಿಯ ಸಹಕಾರಿ ವಿಶ್ವನಾಥ ಹಾಗೂ ತಾಯಿ ರಾಜೇಶ್ವರಿ.
ಸ್ವಗ್ರಾಮದಲ್ಲಿಯೇ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.
ಹುಕ್ಕೇರಿ ಶಾಸಕರಾಗಿದ್ದ ತಂದೆ ವಿಶ್ವನಾಥ ಕತ್ತಿ ಅಕಾಲಿಕ ನಿಧನದ ಬಳಿಕ 1985ರಲ್ಲಿ ರಾಜಕಾರಣ ಪ್ರವೇಶಿಸಿ, ಹುಕ್ಕೇರಿ ವಿಧಾಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.
ಇಲ್ಲಿಯವೆರೆಗೆ 8 ಬಾರಿ ಶಾಸಕರಾಗಿರುವ ಇವರು ಇಲ್ಲಿಯವರೆಗೆ ಆರು ಪಕ್ಷಗಳನ್ನು ಬದಲಿಸಿದ್ದಾರೆ. ಇಷ್ಟೆಲ್ಲ ಪಕ್ಷ ಬದಲಿಸಿಯೂ ಇವರು ಸೋತಿದ್ದು ಒಮ್ಮೆ ಮಾತ್ರ. ಮೇಲಿಂದ ಮೇಲೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಪ್ರಸ್ತಾಪ, ನಾನು ಡಿಸಿಎಂ ಅಲ್ಲ- ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವುದು; ಹೀಗೆ ಆಗಾಗ ಸುದ್ದಿಗೆ ಗ್ರಾಸವಾಗುತ್ತಿದ್ದ ಉಮೇಶ ಕತ್ತಿ ವರ್ಣರಂಜಿತ ರಾಜಕಾರಣಿಯಾಗಿದ್ದರು.