ರಷ್ಯನ್ ಸೇನೆಯ ವಶದಲ್ಲಿರುವ ಝಪೋರಿಝಿಯಾ ಅಣುಸ್ಥಾವರದ ಬಳಿ ಸಂಘರ್ಷ ಮುಂದುವರಿದಿದ್ದು ಸ್ಥಾವರಕ್ಕೆ ಹಾನಿಯಾಗಿ ವಿಕಿರಣ ದುರಂತದ ಭೀತಿ ಸ್ಥಳೀಯರಲ್ಲಿ ಎದುರಾಗಿದೆ.
ಅಣುಸ್ಥಾವರದ ಪ್ರದೇಶದಲ್ಲಿ ನಿರಂತರ ಕ್ಷಿಪಣಿ ಮತ್ತು ಫಿರಂಗಿ ದಾಳಿ ನಡೆಯುತ್ತಿರುವುದಕ್ಕೆ ಎರಡೂ ದೇಶಗಳು ಪರಸ್ಪರರನ್ನು ದೂಷಿಸುತ್ತಿವೆ.
ಅಣುಸ್ಥಾವರದ ಬಳಿ ಭಾರೀ ಶಸ್ತ್ರಾಸ್ತ್ರಗಳನ್ನು ರಶ್ಯ ಪೇರಿಸಿದೆ ಎಂದು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ. ಆದರೆ ಇದನ್ನು ತಳ್ಳಿಹಾಕಿರುವ ರಶ್ಯ, ಅಣುಸ್ಥಾವರದ ಬಳಿಯಿಂದ ತನ್ನ ಪಡೆಯನ್ನು ಸ್ಥಳಾಂತರಿಸಲು ಮತ್ತು ಈ ವಲಯವನ್ನು ಸೇನಾಮುಕ್ತಗೊಳಿಸಲು ನಿರಾಕರಿಸುತ್ತಿದೆ.
ಈ ಮಧ್ಯೆ, ಉಕ್ರೇನ್ ಪಡೆ ಅಣುಸ್ಥಾವರನ್ನು ವಶಕ್ಕೆ ಪಡೆಯಲು ಶನಿವಾರ ವಿಫಲ ಪ್ರಯತ್ನ ನಡೆಸಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಆರೋಪಿಸಿದೆ.
ಅಣುಸ್ಥಾವರಕ್ಕೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟರ್ಕಿ ಹೇಳಿದೆ. ಅಣುಸ್ಥಾವರದ ಸಮೀಪದ ಖೆರ್ಸಾನ್ ಬಳಿ ಭೀಕರ ಫಿರಂಗಿ ದಾಳಿ ಮುಂದುವರಿದಿರುವುದರಿಂದ ಸ್ಥಾವರದಲ್ಲಿ ವಿಕಿರಣ ದುರಂತದ ಅಪಾಯವಿದೆ ಎಂದು ಅಂತರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆ ಎಚ್ಚರಿಸಿದೆ.