Sunday, December 7, 2025
Sunday, December 7, 2025

ಬಹಳಷ್ಟು ಅಪರೂಪದಗಣಪತಿ ಕತೆಯೊಂದು ಹೀಗಿದೆ

Date:

ಗಣಪತಿಯ ಹುಟ್ಟಿನ ಬಗ್ಗೆ ಹಾಗೂ ಗಣಪತಿಗೆ ಆನೆಯ ಮುಖ ಬಂದ ಬಗ್ಗೆ ಸಾಮಾನ್ಯವಾಗಿ ನಂಬಿರುವ ಕಥೆ ಒಂದಾದರೆ ಬ್ರಹ್ಮ ವೈವರ್ತ ಪುರಾಣ ಹೇಳುವುದೇ ಇನ್ನೊಂದು ಕಥೆ, ಅದನ್ನಿಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಗಣಪತಿಯ ಹುಟ್ಟಿನ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ತಿಳಿದಿರುವುದು ಏನೆಂದರೆ ಪಾರ್ವತಿಯ ಮೈ ಮಣ್ಣಿನಿಂದ ಸೃಷ್ಟಿಯಾದ ಮಗುವಿನ ಶಿರವನ್ನು ಗೊತ್ತಿಲ್ಲದೇ ಶಿವ ತ್ರಿಶೂಲದಿಂದ ತೆಗೆದ, ನಂತರ ತಪ್ಪಿನ ಅರಿವಾಗಿ ಆನೆಯ ಶಿರವನ್ನು ಅದಕ್ಕೆ ಜೋಡಿಸಿ ‘ಗಣಾಧಿಪತಿ’ ಎಂದು ಹರಸಿದ ಎಂಬುದು ಕಥೆ ಆದರೆ ಅಷ್ಟಾದಶ ಪುರಾಣಗಳಲ್ಲಿ ಒಂದಾದ ‘ಬ್ರಹ್ಮವೈವರ್ತ ಪುರಾಣ’ದಲ್ಲಿ ಗಣಪತಿಯ ಹುಟ್ಟಿನ ಬಗ್ಗೆ ಮತ್ತೊಂದು ಕಥೆಯೇ ಇದೆ. ಇದು ಸ್ವಾರಸ್ಯಕರವೂ ಆಗಿದೆ. ಬ್ರಹ್ಮ ವೈವರ್ತ ಪುರಾಣದ ಗಣಪತಿ ಖಂಡದಲ್ಲಿ ಹೇಳುವ ಪ್ರಕಾರ ಗಣಪತಿಯು ಪಾರ್ವತಿಯ ಗರ್ಭ ಸಂಜಾತನಾಗಿದ್ದು ಆಕೆಯ ಉದರದಿಂದ ಜನಿಸಿದ ಮಗುವಿನ ತೊಟ್ಟಿಲು ಕಾರ್ಯದಲ್ಲಿ ದೇವಾನುದೇವತೆಗಳೆಲ್ಲರೂ ಆಗಮಿಸಿ ಆಶೀರ್ವಾದಪೂರ್ವಕವಾಗಿ ವರಗಳನ್ನು ಕೊಟ್ಟಾಗ ವಿಷ್ಣುವು ಆ ಮಗುವಿಗೆ ಅಂದರೆ ಗಣಪತಿಗೆ “ಜ್ಞಾನಿಯಾಗು, ಪರಾಕ್ರಮಿಯಾಗು” ಎಂದರೆ ಬ್ರಹ್ಮನು “ಕೀರ್ತಿ ಶಾಲೆಯಾಗು” ಎಂದೂ ಶಿವನು “ದಾನಬುದ್ಧಿ, ವಿದ್ಯೆ ಮತ್ತು ಪುಣ್ಯದ ನೆಲೆಯಾಗು” ಎಂದೂ ಧರ್ಮನು “ಧರ್ಮಸ್ಥನಾಗು” ಎಂದೂ ಲಕ್ಷ್ಮಿಯು “ಸದಾ ಸೌಭಾಗ್ಯದಾತನಾಗು” ಎಂದೂ ಸರಸ್ವತಿಯು “ಕವಿತೆ ಮತ್ತು ವಿದ್ಯಾಧಾರಣ ಶಕ್ತಿ ಉಳ್ಳವನಾಗು” ಎಂದೂ ವೇದಮಾತೆ ಗಾಯತ್ರಿಯು “ವೇದಾಧಿಪತ್ಯ ನಿನಗಾಗಲೆಂದೂ” ಹಿಮಾಲಯವು “ನಿಶ್ಚಲತೆಯನ್ನೂ”, ಮೇನಾ ದೇವಿಯು “ಗಾಂಭೀರ್ಯತೆಯನ್ನೂ, ಸಮುದ್ರವು “ರತ್ನಾಕರತ್ವ ವನ್ನೂ,” ಭೂದೇವಿಯು “ಕ್ಷಮಾಗುಣ” ಮುಂತಾಗಿ ವರಗಳನ್ನಾಗಿ ಆ ಮಗುವಿಗೆ ಅಂದರೆ ಗಣಪತಿಗೆ ನೀಡಿದಾಗ ಅಲ್ಲಿಗೆ ಬಂದಿದ್ದ ಶನಿದೇವರು ತಾನು ಮಗುವನ್ನು ನೋಡದೆ ದೂರದಿಂದಲೇ ಆಶೀರ್ವಾದ ಮಾಡಿ ಹೋಗುವುದಾಗಿಯೂ, ತನ್ನ ದೃಷ್ಟಿಯು ಮಗುವಿನ ಮೇಲೆ ಬೀಳುವುದು ಬೇಡ ಎಂದೂ ಹೇಳಿದಾಗ ಪಾರ್ವತಿಯು ಅದಕ್ಕೆ ಒಪ್ಪದೇ ಮಗುವನ್ನು ನೋಡಿಯೇ ಆಶೀರ್ವದಿಸುವಂತೆ ಶನಿ ದೇವರನ್ನು ಒತ್ತಾಯಿಸಿದಳು.

ಶನಿದೇವರ ಅದೋದೃಷ್ಟಿ ಆ ಮಗುವಿನ ಮೇಲೆ ಬೀಳುತ್ತಲೇ ಮಗುವಿನ ಶಿರ ಅಂದರೆ ತಲೆ ಹೋಯಿತು, ಆಗ ಕೋಪಗೊಂಡ ಪಾರ್ವತಿಯು “ನಿನಗೆ ಕಾಲಿಲ್ಲದೇ ಹೋಗಲಿ, ಕುಂಟನಾಗು” ಎಂದು ಶನಿ ದೇವರಿಗೆ ಶಾಪ ಕೊಟ್ಟಳು. ಪಾರ್ವತಿಯ ಶಾಪದಿಂದಾಗಿ ಮಂದಗತಿಯವನಾದ ಅಂದರೆ ನಿಧಾನಗತಿಯವನಾದ ಶನಿಯು ಸೂರ್ಯನ ಸುತ್ತ ಸುತ್ತಲು ಏಳೂವರೆ ವರ್ಷ ತೆಗೆದುಕೊಳ್ಳುವಂತಾಯಿತು. ಮಗುವಿನ ಶಿರಹೋದ ಬಗ್ಗೆ ಪಾರ್ವತಿಯು ದುಃಖಿಸಿದಾಗ ಶಿವನು ಐರಾವತದ ಸಂತಾನವಾದ ಆನೆಯೊಂದರ ಶಿರವನ್ನು ತರಿಸಿ ಆ ಮಗುವಿಗೆ ಜೋಡಿಸಿ ‘ಗಣಾಧಿಪತಿ’ಯೆಂಬುದಾಗಿ ಹರಸಿದ ಎಂದು ಬ್ರಹ್ಮ ವೈವರ್ತ ಪುರಾಣದ ‘ಗಣಪತಿ ಖಂಡ’ವು ಹೇಳುತ್ತದೆ.

ಪಾರ್ವತಿಯು ತಾನಾಗಿಯೇ ಶನಿದೇವರನ್ನು ಒತ್ತಾಯಿಸಿ ಮಗುವನ್ನು ನೋಡುವಂತೆ ಮಾಡಿದ್ದು ಅದರಿಂದಾಗಿ ಮಗುವಿನ ತಲೆ ಹೋಗಿದ್ದು, ತಾನು ಶನಿ ದೇವರಿಗೆ ಶಾಪ ಕೊಟ್ಟದ್ದು ಹೀಗೆಲ್ಲ ಏಕೆ ಆಯಿತೆಂದು ವಿಷ್ಣುವನ್ನು ಕೇಳಿದಾಗ ವಿಷ್ಣುವು “ನಾನು ಬೇರೆಯಲ್ಲ, ಗಣಪತಿ ಬೇರೆಯಲ್ಲ, ಹಿಂದೆ ಕಶ್ಯಪನ ಪತ್ನಿಯಾಗಿದ್ದ ದನುವಿಗೆ ಮಾಲಿ, ಸುಮಾಲಿ ಹಾಗೂ ಮಾಲ್ಯವಂತ ಎಂಬ ಮೂವರು ಮಕ್ಕಳಿದ್ದರು, ಅದರಲ್ಲಿ ಸುಮಾಲಿಯನ್ನು ವಿಷ್ಣು ವಾದ ನಾನು ಕೊಂದಾಗ ಕೋಪಗೊಂಡ ಕಶ್ಯಪರು “ಶಿವ ಪಾರ್ವತಿಯ ಮಗನಾಗಿ ನೀನು ಜನಿಸಿದಾಗ ನನ್ನ ತಲೆ ಹೋಗಲಿ” ಎಂದು ಶಾಪ ಕೊಟ್ಟಿದ್ದರು, ಅದರಿಂದಾಗಿ ಹೀಗೆಲ್ಲಾ ಆಯ್ತುಎಂದು ವಿಷ್ಣು ಹೇಳಿದ. ಪರಶುರಾಮನು ಕಾರ್ತವೀರ್ಯಾರ್ಜುನನನ್ನು ಕೊಂದು ಈ ಸುದ್ದಿಯನ್ನು ತನ್ನ ಗುರುವಿಗೆ ಹೇಳಲೆಂದು ಹೋಗುತ್ತಿರುವಾಗ ಮಾರ್ಗದಲ್ಲಿ ಗಣಪತಿಯು ತಡೆದನು,ಕೋಪಗೊಂಡ ಪರಶುರಾಮನು ತನ್ನ ಕೊಡಲಿಯಿಂದ ಗಣಪತಿಯ ದಂತ ತುಂಡರಿಸಿದ, ಇದರಿಂದಾಗಿ ಗಣಪತಿಯು ‘ಏಕದಂತ’ ನಾದನು ಎಂದೂ ಸಹ ಬ್ರಹ್ಮವೈವರ್ತ ಪುರಾಣದ ಗಣಪತಿ ಖಂಡವು ಹೇಳುತ್ತದೆ. -ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...