ಭಾರಿ ಮಳೆ, ಪ್ರವಾಹದಿಂದ ಬಾಧಿತ ಸಂತ್ರಸ್ತರಿಗೆ ಮನೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬ ಸಲ್ಲದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.
ಭಾರಿ ಮಳೆಯಿಂದ ಹಾನಿಗೆ ಒಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ನಡೆಸಿದರು.
ಕೆರೆಗಳು ತುಂಬಿರುವ ಕಾರಣ ಬಿರುಕು ಉಂಟಾಗದಂತೆ ನಿಗಾವಹಿಸಬೇಕು. ಅದರಲ್ಲೂ ದೊಡ್ಡ ಕೆರೆಗಳಿರುವೆಡೆ ಎಚ್ಚರಿಕೆವಹಿಸಿ ಯಾವುದೇ ಸಾವು, ನೋವಾಗದಂತೆ ನೋಡಿಕೊಳ್ಳಬೇಕು. ತುಂಬಿದ ಕೆರೆಗಳ ಸಮೀಕ್ಷೆ ಕೈಗೆತ್ತಿಕೊಂಡು ಅಗತ್ಯವಿರುವೆಡೆ ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲೂ ಹಣವಿದೆ. ಅಲ್ಲದೆ, ತುರ್ತು ಹಾಗೂ ತಾತ್ಕಾಲಿಕ ಕೆಲಸಗಳಿಗೆ ಬಿಡುಗಡೆ ಹಣ ಬಳಸಿಕೊಂಡು ಮನೆ ಹಾಗೂ ಬೆಳೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸಿ, ಬಾಧಿತರ ಕಷ್ಟಗಳಿಗೆ ಯುದ್ಧೋಪಾದಿಯಲ್ಲಿ ಸ್ಪಂದಿಸಬೇಕು ಎಂದರು.
ಮಳೆಯಿಂದಾಗಿ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ವಾಹನದಟ್ಟಣೆ ಮಾರ್ಗಯಿದಾಗಿದ್ದು, ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಈ ಸಮಸ್ಯೆಗೆ ಪರಿಹಾರವಾಗಿ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಬೇಕು. ಮೈಸೂರು, ರಾಮನಗರ ಮತ್ತು ಮಂಡ್ಯ ಎಸ್ಪಿ ಜಂಟಿಯಾಗಿ ಈ ಹೊಣೆ ನಿರ್ವಹಿಸಬೇಕು ಎಂದು ಸಿಎಂ ಸೂಚಿಸಿದರು.