ಪರಿಸರ ಸಂರಕ್ಷಣೆ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ಗ್ರೀನ್‌ಟೆಕ್ ಪರಿಸರ ಪ್ರಶಸ್ತಿ-2022 ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಗೆ ಸಂದಿದೆ. ಈ ಪ್ರಶಸ್ತಿಯೊಂದಿಗೆ ಸಿಎಸ್‌ಆರ್, ಸುರಕ್ಷತೆ ಹಾಗೂ ಮಾನವ ಸಂಪನ್ಮೂಲದ ಜೊತೆಗೆ ಸಂರಕ್ಷಣೆಯ ಕುರಿತ ಪ್ರಶಸ್ತಿಗೆ ಭಾಜನವಾಗಿದೆ.
ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯು ಪರಿಸರ ಸಂರಕ್ಷಣೆಯನ್ನು ಸುಧಾರಿಸುವ, ನಾವು ಕೆಲಸ ಮಾಡುವ ಮತ್ತು ವಾಸಿಸುವ ಪರಿಸರದ ಸಂರಕ್ಷಣೆಗಾಗಿ ದೀರ್ಘಕಾಲೀನ ಬದಲಾವಣೆಗಳನ್ನು ಸೃಷ್ಠಿಸುವ ಮತ್ತು ಸುಸ್ಥಿರ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ನವೀನ ಅಭ್ಯಾಸಗಳು ಮತ್ತು ಉಪಕ್ರಮಗಳನ್ನು ಅಳವಡಿಸಿಕೊಂಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್‌ರವರು ದಿನಾಂಕ ೨೩ ಮತ್ತು ೨೪ನೇ ಆಗಸ್ಟ್ ೨೦೨೨ ರಂದು ಅಸ್ಸಾಂನ ಗೌಹಾಟಿಯ ತಾಜ್ ವಿವಾಂತ ಹೋಟೆಲ್‌ನಲ್ಲಿ ಆಯೋಜಿಸಲಾದ ಎರಡು ದಿನಗಳ ಶೃಂಗಸಭೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಿರ್ಲೋಸ್ಕರ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ. ನಾರಾಯಣ ಹಾಗೂ ಪರಿಸರ ಮತ್ತು ಸುರಕ್ಷತಾ ಉಪ ವ್ಯವಸ್ಥಾಪಕರಾದ ಶ್ರೀ ಸಂತೋಷ್ ಬಿ ಗುತ್ತೇದಾರ್ ಇವರು ಅಸ್ಸಾಂ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾಕ್ಟರ್ ಅರುಪ್ ಕುಮಾರ್ ಮಿಶ್ರಾ, ಓಎನ್‌ಜಿಸಿ ಲಿಮಿಟೆಡ್‌ನ ಮಾಜಿ ನಿರ್ದೇಶಕರು ಹಾಗೂ ಐಐಎಮ್-ರೋಹ್‌ಟಕ್‌ನ ಶ್ರೀ ವೇದಪ್ರಕಾಶ್ ಮಹಾವರ್ ಮತ್ತು ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕಮಲೇಶ್ವರ್ ಶರಣ್ ಇವರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು, ಅಸ್ಸಾಂ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರವಿಶಂಕರ್ ಪ್ರಸಾದ್ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.
ಪರಿಸರ, ಸುರಕ್ಷತೆ, ವೃತ್ತಿಪರರು, ನಿಯಂತ್ರಕ ಪ್ರಾಧಿಕಾರಗಳು, ತಜ್ಞರು, ಸಲಹೆಗಾರರು ಮತ್ತು ಪರಿಸರ ಹೋರಾಟಗಾರರು ಇತ್ಯಾದಿ ಸುಮಾರು ೨೫೦ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು, ಅನೇಕ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಕಂಪನಿಗಳ ಉನ್ನತ ಕಾರ್ಯನಿರ್ವಾಹಕರು ಮತ್ತು ಪ್ರತಿನಿಧಿಗಳೂ ಸಹ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಎಲ್ಲಾ ಉದ್ಯೋಗಿಗಳು ಸಂಸ್ಥೆಯ ದೃಷ್ಠಿಕೋನ, ಗುರಿ ಹಾಗೂ ಮೌಲ್ಯಗಳನ್ನೊಳಗೊಂಡಂತೆ ಕಾರ್ಯಕ್ಷಮತೆಯ ಮೂಲಕ ಕೆಲಸ ನಿರ್ವಹಿಸಿದುದ್ದಕ್ಕಾಗಿ ಈ ಪ್ರಶಸ್ತಿಯು ಕಾರ್ಖಾನೆಗೆ ಲಭಿಸಿರುತ್ತದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಆರ್.ವಿ. ಗುಮಾಸ್ತೆಯವರು ಈ ಸಂದರ್ಭದಲ್ಲಿ ತಿಳಿಸಿದರು.