ವಾಟ್ಸ್ಯಾಪ್ ಖಾತೆಯನ್ನು ಹ್ಯಾಕ್ ಮಾಡಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಣದ ಅಗತ್ಯವಿದೆ ಎನ್ನುವ ಸಂದೇಶ ರವಾನಿಸುವ ಮೂಲಕ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಕಾಲೇಜಿನಲ್ಲಿ ಲೆಕ್ಕಶಾಸ್ತ್ರ ಉಪನ್ಯಾಸಕಿಯಾಗಿರುವ ಮಹಿಳೆ ವಂಚನೆಗೆ ಬಲಿಯಾಗಿ ಪರಿತಪಿಸುತ್ತಿದ್ದಾರೆ. ವಂಚನೆ ಕುರಿತು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಪಿಯು ಕಾಲೇಜಿನ ಉಪನ್ಯಾಸಕಿ ಮತ್ತು ಲೇಖಕಿ ದೀಪಾ ಹಿರೇಗುತ್ತಿ ಫೇಸ್ಬುಕ್ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಯಾರಿಂದ ಮೆಸೇಜ್ ಬಂದರೂ ಕರೆ ಮಾಡದೇ ದುಡ್ಡು ಕಳಿಸಬೇಡಿ’ ಎಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.
ಇದುವರೆಗೆ ಫೇಸ್ಬುಕ್ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಿದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ ವಾಟ್ಸ್ಯಾಪ್ ಹ್ಯಾಕ್ ಮಾಡಬಹುದುಎಂದು ಎಚ್ಚರಿಸಿದ್ದಾರೆ. ದೀಪಾ ಹಿರೇಗುತ್ತಿ ಅವರು ಈ ಪೋಸ್ಟ್ ವೈರಲ್ ಆಗಿದ್ದು, 700ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 120ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದು, 218 ಅಕೌಂಟ್ಗಳಲ್ಲಿ ಶೇರ್ ಆಗಿದೆ.
ದೀಪಾ ಅವರ ಪೋಸ್ಟ್ನ ಒಕ್ಕಣೆ ಇದು… ‘ಬಹಳ ಮುಖ್ಯ ವಿಷಯ. ದಯವಿಟ್ಟು ಓದಿ. ಹಂಚಿಕೊಳ್ಳಿ. ಮೊನ್ನೆ ನನ್ನ ಸಹೋದ್ಯೋಗಿ ಒಬ್ಬರ ಸಂಬಂಧಿಯ ಮನೆಯಲ್ಲಿ ನಡೆದ ಘಟನೆ. ತಂಗಿಯ ವಾಟ್ಸ್ಯಾಪ್ ನಂಬರ್ನಿಂದ ಅಕ್ಕನಿಗೆ ‘ಅರ್ಜೆಂಟ್ 9000 ಬೇಕು. ನನ್ನ ಕಾರ್ಡ್ ಬ್ಲಾಕ್ ಆಗಿದೆ. ಹಣ ಕಳಿಸು’ ಎಂಬ ಮೆಸೇಜ್ ಬಂದಿದೆ.
ಅದೂ ತಂಗಿ ಅಕ್ಕನನ್ನು ಕರೆಯುವ ನಿಕ್ ನೇಮ್ ಸಹಿತ. ಆಯ್ತು ಎಂದು ಇವಳು ಆ ನಂಬರ್ಗೆ ಒಂಬತ್ತು ಸಾವಿರ ಹಾಕಿದ್ದಾಳೆ. ತಕ್ಷಣ ಇನ್ನು 21 ಸಾವಿರ ಹಾಕು, ಒಟ್ಟಿಗೇ 30 ಸಾವಿರ ಕಳುಹಿಸುತ್ತೇನೆ ನಾಳೆ ಎಂದು ಮೆಸೇಜ್ ಬಂದಿದೆ. ಅಕ್ಕ ಮತ್ತೆ 21,000 ಕಳಿಸಿದ್ದಾರೆ. ಕೆಲ ಕ್ಷಣದಲ್ಲೇ ಮತ್ತೆ 25,000 ಕಳಿಸು ಎಂಬ ಸಂದೇಶ ಬಂದಿದೆ. ಈಗ ಅಕ್ಕನಿಗೆ ಅನುಮಾನ ಶುರು ಆಗಿದೆ. ಫೋನ್ ಮಾಡಿದರೆ ಆ ಕಡೆ ಎತ್ತುವವರಿಲ್ಲ. ಅದೇ ವೇಳೆಗೆ ತಂಗಿಯ ಸ್ನೇಹಿತೆ ಕೂಡ 9 ಸಾವಿರ ಹಾಕಿದ್ದಾಳೆ. ಮತ್ತೊಬ್ಬ ಸ್ನೇಹಿತ ಒಂದು ಸಾವಿರ ಹಾಕಿ ಫೋನ್ ಮಾಡಿದರೆ ಈ ಕಡೆ ಫೋನ್ ಎತ್ತುತ್ತಾ ಇಲ್ಲ. ಅದೇ ವೇಳೆಗೆ ತಂಗಿಯ ಚಿಕ್ಕಮ್ಮನ ಹೈಸ್ಕೂಲ್ ಓದುವ ಮಗಳಿಗೂ hi ಎಂದು ಸಂದೇಶ ಬಂದಿದೆ. ಇವಳು hi ಅಂದಿದ್ದಾಳೆ. 9,000 ಕಳಿಸು ಎಂದು ಸಂದೇಶ ಬಂದಿದೆ. ಅರೆ, ಚಿಕ್ಕಮ್ಮ ಅಮ್ಮನ ಹತ್ತಿರ ಕೇಳೋದು ಬಿಟ್ಟು ನನ್ನ ಹತ್ತಿರ ದುಡ್ಡು ಕೇಳುತ್ತಾ ಇದ್ದಾಳೆ ಏಕೆ ಎಂದು ಅಮ್ಮನಿಗೆ ಹೇಳಿದ್ದಾಳೆ. ವಿಡಿಯೋ ಕಾಲ್ ಮಾಡಿದರೆ ಯಾರೂ ಇಲ್ಲ. ಕಾರಣ ತಂಗಿಯ whatsApp hack ಆಗಿದೆ ಎಂದು ದೀಪಾ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಬರಹ ಮುಂದುವರಿಸಿರುವ ಅವರು, ‘ನೋಡಿ, ಹತ್ತು ನಿಮಿಷದಲ್ಲಿ ಅದೆಷ್ಟು ಮಂದಿಗೆ ಮೆಸೇಜ್ ಮಾಡಿ ಅದೆಷ್ಟು ದುಡ್ಡು ಹೊಡೆದಿದ್ದಾರೆ! ಇದುವರೆಗೆ Facebook ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಾ ಇದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ whatsApp ಅನ್ನು hack ಮಾಡಬಹುದು. So be careful. ಯಾರಿಂದ ಮೆಸೇಜ್ ಬಂದರೂ ಕರೆ ಮಾಡದೇ ದುಡ್ಡು ಕಳಿಸಬೇಡಿ. ಇದನ್ನು ಓದಿದ ನೀವು ಮತ್ತು ನಿಮ್ಮ ಸಂಬಂಧಿಗಳು, ಸ್ನೇಹಿತರು ಯಾರೂ ದುಡ್ಡು ಕಳೆದುಕೊಳ್ಳಬೇಡಿ’ ಎಂದು ಎಚ್ಚರಿಸಿದ್ದಾರೆ.